ನಕಲಿ ಎನ್​ಕೌಂಟರ್​ ವಿವಾದ: ಯೋಗಿ ಸರ್ಕಾರಕ್ಕೆ ಸುಪ್ರೀಂ ನೋಟಿಸ್​

ನವದೆಹಲಿ: ಉತ್ತರ ಪ್ರದೇಶದಲ್ಲಿ ನಕಲಿ ಎನ್​ಕೌಂಟರ್​ಗಳು ನಡೆದಿವೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ವಿವರಣೆ ನೀಡುವಂತೆ ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ನೋಟಿಸ್​ ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್​ವಿಲ್ಕರ್​ ಮತ್ತು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಅವರಿದ್ದ ಪೀಠ ಪೀಪಲ್ಸ್​ ಯೂನಿಯನ್​ ಫಾರ್​ ಸಿವಿಲ್​ ಲಿಬರ್ಟಿ (PUCL) ಎಂಬ ಎನ್​ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ ನಡೆಸಿತು.

ಎನ್​ಜಿಒ ಪರ ವಾದ ಮಂಡಿಸಿದ ವಕೀಲರು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸುಮಾರು 500 ಎನ್​ಕೌಂಟರ್​ ನಡೆಸಲಾಗಿದೆ. ಇದರಲ್ಲಿ ಒಟ್ಟು 58 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಬಹುಪಾಲು ಎನ್​ಕೌಂಟರ್​ಗಳು ನಕಲಿ ಎಂದು ವಾದಿಸಿದರು.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಅಪರಾಧ ಚಟುವಟಿಕೆಗಳು ಮತ್ತು ಅಪರಾಧಿಗಳ ವಿರುದ್ಧ ಸಮರ ಸಾರಿದ್ದರು. ಆದರೆ, ಉತ್ತರ ಪ್ರದೇಶ ಸರ್ಕಾರದ ಈ ಕ್ರಮವನ್ನು ಎಸ್​.ಪಿ., ಬಿಎಸ್​ಪಿ, ಕಾಂಗ್ರೆಸ್​ ಪಕ್ಷದ ನಾಯಕರು ಟೀಕಿಸಿದ್ದರು. ಜತೆಗೆ ಬಿಜೆಪಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಕಲಿ ಎನ್​ಕೌಂಟರ್​ ನಡೆಸುತ್ತಿದೆ ಎಂದು ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸಹ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್​ ನೀಡಿತ್ತು. (ಏಜೆನ್ಸೀಸ್​)