ಅಲೋಕ್​ ವರ್ಮಾ ವಿರುದ್ಧದ ತನಿಖೆ 2 ವಾರದೊಳಗೆ ಪೂರ್ಣಗೊಳಿಸಿ: ಸಿವಿಸಿಗೆ ಸುಪ್ರೀಂ ಸೂಚನೆ

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಯ ನಿರ್ದೇಶಕ ಅಲೋಕ್​ ಕುಮಾರ್​ ವರ್ಮಾ ಅವರ ವಿರುದ್ಧದ ತನಿಖೆಯನ್ನು ಕೇಂದ್ರೀಯ ವಿಚಕ್ಷಣ ದಳ (ಸಿವಿಸಿ) 2 ವಾರದೊಳಗೆ ಪೂರ್ಣಗೊಳಿಸಿ ಕೋರ್ಟ್​ಗೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್​ ಸೂಚಿಸಿದೆ.

ಕೇಂದ್ರ ಸರ್ಕಾರ ತಮ್ಮನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವುದನ್ನು ಪ್ರಶ್ನಿಸಿ ಅಲೋಕ್​ ವರ್ಮಾ ಅವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​, ಜಸ್ಟೀಸ್​ ಎಸ್​.ಕೆ. ಕೌಲ್​ ಮತ್ತು ಕೆ.ಎಂ. ಜೋಸೆಫ್​ ಅವರಿದ್ದ ಪೀಠ 10 ದಿನದೊಳಗೆ ತನಿಖೆ ಪೂರ್ಣಗೊಳಿಸುವಂತೆ ಸಿವಿಸಿಗೆ ಸೂಚಿಸಿತು.

ಆದರೆ, ಇದಕ್ಕೆ ಸಿವಿಸಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಕೋರ್ಟ್ 2 ವಾರಗಳೊಂಗೆ ತನಿಖೆ ಪೂರ್ಣಗೊಳಿಸಬೇಕು. ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್​ ಅವರು ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್​ಗೆ ಸಲ್ಲಿಸಬೇಕು ಎಂದು ತಿಳಿಸಿದೆ.

ಇದೇ ಸಂದರ್ಭದಲ್ಲಿ ಹಂಗಾಮಿ ನಿರ್ದೇಶಕ ಎಂ. ನಾಗೇಶ್ವರ್​ ರಾವ್​ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಬಾರದು. ಅವರು ಅಕ್ಟೋಬರ್​ 23 ರಿಂದ ತೆಗೆದುಕೊಂಡಿರುವ ನಿರ್ಧಾರಗಳನ್ನು ಅನುಷ್ಠಾನಗೊಳಿಸಬಾರದು ಎಂದು ಕೋರ್ಟ್​ ಸೂಚಿಸಿತು.  ವಿಚಾರಣೆಯನ್ನು ನವೆಂಬರ್​ 12ಕ್ಕೆ ಮುಂದೂಡಲಾಗಿದೆ. (ಏಜೆನ್ಸೀಸ್​)

ಸಿಬಿಐಗೆ ಭರ್ಜರಿ ಸರ್ಜರಿ

ಸಿಬಿಐನಲ್ಲಿ ಸೆಲ್ಫ್​ ತನಿಖೆ ಬಲೆ