ಆರ್​ಟಿಐ ಅಡಿ ಬ್ಯಾಂಕ್​ಗಳ ತಪಾಸಣಾ ವರದಿ ಬಹಿರಂಗಗೊಳಿಸಲು ಆರ್​ಬಿಐಗೆ ಕೊನೇ ಅವಕಾಶ ನೀಡಿದ ಸುಪ್ರೀಂ

ನವದೆಹಲಿ: ತಾನು ವಾರ್ಷಿಕವಾಗಿ ನಡೆಸುವ ಬ್ಯಾಂಕ್​ಗಳ ತಪಾಸಣೆ ಕುರಿತ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಬಹಿರಂಗಗೊಳಿಸುವಂತೆ ತಾನು ನೀಡಿದ್ದ ಸೂಚನೆಯನ್ನು ಪಾಲಿಸಲು ಸುಪ್ರೀಂಕೋರ್ಟ್​ ಭಾರತೀಯ ರಿಸರ್ವ್​ ಬ್ಯಾಂಕ್​ಗೆ (ಆರ್​ಬಿಐ) ಕೊನೇ ಅವಕಾಶ ನೀಡಿದೆ.

ಆರ್​ಟಿಐ ಅಡಿ ಈ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್​ ಈ ಹಿಂದೆಯೇ ಆರ್​ಬಿಐಗೆ ಸೂಚನೆ ನೀಡಿತ್ತು. ಆದರೆ, ಆರ್​ಬಿಐ ಅದನ್ನು ಈವರೆಗೂ ಪಾಲಿಸಿರಲಿಲ್ಲ. ಆದ್ದರಿಂದ, ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಆರ್​ಬಿಐ ಅನ್ನು ಸುಪ್ರೀಂಕೋರ್ಟ್​ ಎಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ ತನ್ನ ಆದೇಶಕ್ಕೆ ವಿರುದ್ಧವಾಗಿರುವ ಆರ್​ಬಿಐನ ಮಾಹಿತಿಯ ಗೌಪ್ಯತೆ ಕಾಯ್ದುಕೊಳ್ಳುವ ನಿಯಮವನ್ನು ಕೂಡಲೇ ತಿದ್ದುಪಡಿಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಲ್​. ನಾಗೇಶ್ವರ್​ ರಾವ್​ ಮತ್ತು ಎಂ.ಆರ್​. ಷಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್​ನ ನ್ಯಾಯಪೀಠ ಹೇಳಿದೆ. (ಏಜೆನ್ಸೀಸ್​)