ಕ್ರಿಕೆಟಿಗ ಶ್ರೀಶಾಂತ್​ ಮೇಲಿನ ಜೀವನ ಪರ್ಯಂತ ಕ್ರಿಕೆಟ್ ನಿಷೇಧಾಜ್ಞೆಯನ್ನು ತೆರವುಗೊಳಿಸಿದ ಸುಪ್ರೀಂ ಕೋರ್ಟ್​

ನವದೆಹಲಿ: ಬಿಸಿಸಿಐನ ಶಿಸ್ತು ಸಮಿತಿ ಕ್ರಿಕೆಟಿಗ ಎಸ್​.ಶ್ರೀಶಾಂತ್ ಗೆ​ ವಿಧಿಸಿದ್ದ ಆಜೀವ ಕ್ರಿಕೆಟ್​ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂಕೋರ್ಟ್​ ಶುಕ್ರವಾರ ಆದೇಶವನ್ನು ಹೊರಡಿಸಿದೆ.

ನ್ಯಾಯಮೂರ್ತಿ ಅಶೋಕ್​ ಭೂಷಣ್​​​ ನೇತೃತ್ವದ ಸಾಂವಿಧಾನಿಕ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಜೀವನ ಪರ್ಯಂತ ಶಿಕ್ಷೆಯ ಬದಲಾಗಿ ಮೂರು ತಿಂಗಳೊಳಗೆ ಶ್ರೀಶಾಂತ್​ಗೆ ನೀಡಬೇಕಾದ ಶಿಕ್ಷೆ ಪ್ರಮಾಣವನ್ನು ನಿಗದಿಪಡಿಸುವಂತೆ ಬಿಸಿಸಿಐಗೆ ನಿರ್ದೇಶಿಸಿದೆ.

ಬಿಸಿಸಿಐ ಶಿಸ್ತು ಸಮಿತಿಯ ಬಳಿ ತಮ್ಮ ಶಿಕ್ಷೆಯ ಪ್ರಮಾಣವನ್ನು ಕೇಳಲು ಶ್ರೀಶಾಂತ್​ಗೆ ಅವಕಾಶವಿದೆ ಎಂದು ಕೋರ್ಟ್​ ತಿಳಿಸಿದ್ದು, ಈ ಆದೇಶ ಶ್ರೀಶಾಂತ್​ ವಿರುದ್ಧ ಬಾಕಿಯಿರುವ ಕ್ರಮಿನಲ್​ ಪ್ರಕರಣಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

2013ರ ಐಪಿಎಲ್​ ಆವೃತ್ತಿಯಲ್ಲಿ ಶ್ರೀಶಾಂತ್​ ಸ್ಪಾಟ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಬಿಸಿಸಿಐ ಶ್ರೀಶಾಂತ್​ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಜೀವನ ಪರ್ಯಂತ ಕ್ರಿಕೆಟ್​ನಿಂದ ನಿಷೇಧಿಸಿ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಶ್ರೀಶಾಂತ್​ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. (ಏಜೆನ್ಸೀಸ್​)