ವಾರಾಣಸಿಯಲ್ಲಿ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿದ್ದ ತೇಜ್​ ಬಹಾದ್ದೂರ್​ ಅರ್ಜಿ ವಜಾ

ನವದೆಹಲಿ: ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಸಮಾಜವಾದಿ ಪಕ್ಷದ ವತಿಯಿಂದ ತಾವು ಸಲ್ಲಿಸಿದ್ದ ಉಮೇದುವಾರಿಕೆ ತಿರಸ್ಕರಿಸಿದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಬಿಎಸ್​ಎಫ್​ನ ಮಾಜಿ ಯೋಧ ತೇಜ್​ ಬಹಾದ್ದೂರ್​ ಯಾದವ್​ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ.

ವಿಚಾರಣೆಗೆ ಅರ್ಹವಾದ ಯಾವುದೇ ಅಂಶಗಳು ತೇಜ್​ ಬಹಾದ್ದೂರ್​ ಯಾದವ್​ ಸಲ್ಲಿಸಿರುವ ಅರ್ಜಿಯಲ್ಲಿ ಇಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರು ಯಾದವ್​ ಅವರ ಅರ್ಜಿಯನ್ನು ತಿರಸ್ಕರಿಸಿದರು.

ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್​ ಅಜಯ್​ ರಾಯ್​ ಅವರನ್ನೂ ಕಣಕ್ಕಿಳಿಸಿದೆ. ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವ ಎಸ್​ಪಿ-ಬಿಎಸ್​ಪಿ ಅಭ್ಯರ್ಥಿಯಾಗಿ ಮಾಜಿ ಯೋಧ ತೇಜ್​ ಬಹಾದ್ದೂರ್​ ಯಾದವ್​ ಉಮೇದುವಾರಿಕೆ ಸಲ್ಲಿಸಿದ್ದರು.

ಬಿಎಸ್​ಎಫ್​ನಲ್ಲಿ ಕಾನ್​ಸ್ಟೆಬಲ್​ ಆಗಿದ್ದ ಯಾದವ್​, ಯೋಧರಿಗೆ ನೀಡುವ ಅಹಾರದ ಗುಣಮಟ್ಟವನ್ನು ಟೀಕಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇವರನ್ನು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಎಸ್​ಪಿ ಕಣಕ್ಕಿಳಿಸಿತ್ತು. ಆದರೆ, ಚುನಾವಣೆಗೆ ಸ್ಪರ್ಧಿಸಲು ಅಗತ್ಯ ದಾಖಲಾತಿಗಳನ್ನು ಸಲ್ಲಿಸದ ಕಾರಣ ಚುನಾವಣಾ ಆಯೋಗ ಇವರ ನಾಮಪತ್ರವನ್ನು ತಿರಸ್ಕರಿಸಿತ್ತು.

One Reply to “ವಾರಾಣಸಿಯಲ್ಲಿ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿದ್ದ ತೇಜ್​ ಬಹಾದ್ದೂರ್​ ಅರ್ಜಿ ವಜಾ”

Comments are closed.