ವಿಪಕ್ಷಗಳಿಗೆ ಚಾಟಿ: ಇವಿಎಂ ರಗಳೆ ನಿಲ್ಲಿಸಲು ಸುಪ್ರೀಂ ಫರ್ಮಾನು

ನವದೆಹಲಿ: ‘ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ರಗಳೆ ನಿಲ್ಲಿಸಿ, ದೇಶವು ತನ್ನ ಸರ್ಕಾರ ಆಯ್ಕೆ ಮಾಡಲು ಬಿಡಿ..’ ಎಲ್ಲ ವಿವಿಪ್ಯಾಟ್​ಗಳಲ್ಲಿನ ಮತಚೀಟಿ ಎಣಿಕೆ ಮಾಡಬೇಕೆಂಬ ಕೋರಿಕೆ ಮುಂದಿಟ್ಟುಕೊಂಡು ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ವಿಪಕ್ಷಗಳಿಗೆ ನೀಡಿರುವ ಖಡಕ್ ಸಂದೇಶವಿದು.

ಇವಿಎಂ ಅನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿರುವ ವಿಪಕ್ಷಗಳ ವಿರುದ್ಧ ನ್ಯಾಯಾಲಯ ಆಕ್ರೋಶ ಹೊರಹಾಕಿತು. ‘ಈ ರಗಳೆಯನ್ನು ನಿಲ್ಲಿಸಿ, ವಿವಿಪ್ಯಾಟ್​ಗೆ ಸಂಬಂಧಿಸಿದ ಅರ್ಜಿ ಮಾನ್ಯ ಮಾಡಲು ಸಾಧ್ಯವಿಲ್ಲ. ಈ ರೀತಿ ಪದೇಪದೆ ಅರ್ಜಿ ಸಲ್ಲಿಸುವುದರ ಪ್ರಯೋಜನವೇನು? ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನಾವು ಅಡ್ಡಿಬರಲು ಸಾಧ್ಯವಿಲ್ಲ. ದೇಶವು ತನ್ನ ಸರ್ಕಾರ ಆಯ್ಕೆ ಮಾಡಿಕೊಳ್ಳಲು ಬಿಡಿ’ ಎಂದು ಸೂಚಿಸಿತು. ಚೆನ್ನೈ ಮೂಲದ ಟೆಕ್ ಫಾರ್ ಆಲ್ ಎನ್ನುವ ಸಂಸ್ಥೆ ಈ ಬಾರಿ ಅರ್ಜಿ ಸಲ್ಲಿಸಿತ್ತು. ಈ ಹಿಂದೆ ಪ್ರತಿಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವೇ ಈ ಅರ್ಜಿಯನ್ನು ಕೂಡ ವಜಾಗೊಳಿಸಿದೆ.

ಮತದಾರರ ನಿರ್ಣಯ ಬದಲಿಸುವ ಪ್ರಯತ್ನ ನಡೆಯುತ್ತಿದೆ ಎಂಬ ವರದಿ ಬರುತ್ತಿವೆ. ಇವಿಎಂಗಳ ಭದ್ರತೆ ಚುನಾವಣಾ ಆಯೋಗದ ಜವಾಬ್ದಾರಿ. ಇವಿಎಂಗಳ ಬಗ್ಗೆ ಇಂತಹ ಯಾವುದೇ ಗೊಂದಲ ಅಥವಾ ಸಂಶಯ ಇರಕೂಡದು. ಚುನಾವಣಾ ಆಯೋಗ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.

| ಪ್ರಣಬ್ ಮುಖರ್ಜಿ ಮಾಜಿ ರಾಷ್ಟ್ರಪತಿ

ಕೈಕೊಟ್ಟಿತೇ ದೋಸ್ತಿ?

ಇವಿಎಂ ಹೋರಾಟ ಸಂಬಂಧ ಮಂಗಳವಾರ ಪ್ರತಿಪಕ್ಷಗಳು ಕರೆದಿದ್ದ ಸಭೆಯಲ್ಲಿ ಬಿಎಸ್ಪಿ ವರಿಷ್ಠೆ ಮಾಯಾವತಿ, ಎಸ್ಪಿ ನಾಯಕ ಅಖಿಲೇಶ್ ಯಾದವ್, ಡಿಎಂಕೆಯ ಸ್ಟಾಲಿನ್, ಕರ್ನಾಟಕ ಸಿಎಂ ಕುಮಾರಸ್ವಾಮಿ ಗೈರು ಕಾಡಿತು. ಆಯಾ ಪಕ್ಷಗಳ 2ನೇ ಹಂತದ ನಾಯಕರು ಪಕ್ಷವನ್ನು ಪ್ರತಿನಿಧಿಸಿ ದರಾದರೂ, ಪ್ರಮುಖರು ಗೈರಾಗಿದ್ದು ಉದ್ದೇಶಪೂರ್ವಕವೇ ಎಂಬ ಅನುಮಾನವನ್ನು ಇಮ್ಮಡಿಗೊಳಿಸಿದೆ. ಇವಿಎಂ ವಿಚಾರದ ಲಾಭ ಪಡೆಯುವ ಕಾಂಗ್ರೆಸ್ ಯತ್ನಕ್ಕೆ ನಾವೇಕೆ ಬೆಂಬಲಿಸಬೇಕೆಂಬ ನಿಲುವೇ ಈ ನಡೆಗೆ ಕಾರಣವಿರಬಹುದೆನ್ನಲಾಗುತ್ತಿದೆ.

Leave a Reply

Your email address will not be published. Required fields are marked *