ರಫೇಲ್​ ಡೀಲ್​ ತನಿಖೆಗೆ ಸುಪ್ರೀಂ ಕೋರ್ಟ್​ ಅಸಮ್ಮತಿ: ಕೇಂದ್ರ ಸರ್ಕಾರ ನಿರಾಳ

ನವದೆಹಲಿ: ರಫೇಲ್​ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಅಕ್ರಮವಾಗಿದ್ದು ನ್ಯಾಯಾಲಯ ಉಸ್ತುವಾರಿಯಲ್ಲಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ಸುಪ್ರೀಂಕೋರ್ಟ್​ ವಜಾಗೊಳಿಸಿದೆ.

ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠ ತೀರ್ಪು ನೀಡಿದ್ದು, ಫ್ರೆಂಚ್​ ಡಸಾಲ್ಟ್​ ಏವಿಯೇಶನ್​ ಕಂಪನಿಯಿಂದ 36 ರಫೇಲ್​ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ತೃಪ್ತಿಕರವಾಗಿದೆ. ಏರ್​ಕ್ರಾಫ್ಟ್​ ಖರೀದಿ ವಿಚಾರದಲ್ಲಿ ನ್ಯಾಯಾಲಯ ಮೇಲ್ಮನವಿ ಪ್ರಾಧಿಕಾರದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದೆ.

ಈಗ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್​, ಬೆಲೆ ನಿರ್ಧಾರ ಮಾರಾಟಗಾರರಿಗೆ ಬಿಟ್ಟ ವಿಚಾರವೇ ಹೊರತು ಸರ್ಕಾರದ ತೀರ್ಮಾನವಾಗಿರುವುದಿಲ್ಲ ಎಂದಿದೆ. ಇದರಲ್ಲಿ ವಾಣಿಜ್ಯ ವ್ಯವಹಾರದಲ್ಲಿ ಪಕ್ಷಪಾತ ಮಾಡಿರುವ ಯಾವುದೇ ಅಂಶ ಕಾಣಿಸುತ್ತಿಲ್ಲ. ಆವಾಗಿನ 126 ಯುದ್ಧ ವಿಮಾನಗಳಿಗೆ, ಈಗಿನ 36 ವಿಮಾನಗಳ ಖರೀದಿ ಬೆಲೆಯನ್ನು ಹೋಲಿಕೆ ಮಾಡುವುದು ಕೋರ್ಟ್​ನ ಕೆಲಸವಲ್ಲ ಎಂದು ಹೇಳಿದೆ.

ನ.14ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಎಸ್​.ಕೆ.ಕೌಲ್​, ಕೆ.ಎಂ.ಜೋಸೆಫ್​ ಅವರನ್ನೊಳಗೊಂಡ ಪೀಠ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ಯುದ್ಧ ವಿಮಾನ ಖರೀದಿಯಲ್ಲಿ ದೊಡ್ಡ ಮೊತ್ತದ ಅಕ್ರಮ ನಡೆದಿದೆ. ಸೂಕ್ತ ತನಿಖೆಯಾಗಬೇಕು ಎಂದು ವಕೀಲ ಪ್ರಶಾಂತ್​ ಭೂಷಣ್​, ಮಾಜಿ ಕೇಂದ್ರ ಸಚಿವ ಅರುಣ್​ ಶೌರಿ, ಯಶ್ವಂತ್​ ಸಿನ್ಹಾ, ಆಮ್​ ಆದ್ಮಿ ಪಕ್ಷದ ರಾಜ್ಯ ಸಭಾ ಸದಸ್ಯ ಸಂಜಯ್​ ಸಿಂಗ್​ ಹಾಗೂ ವಕೀಲರಾದ ಎಂ.ಎಲ್​ ಶರ್ಮಾ ಮತ್ತು ವಿನೀತ್​ ಧಂಡಾ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಒಪ್ಪಂದಕ್ಕೆ ಫ್ರೆಂಚ್​ ಡಸಾಲ್ಟ್​ ಏವಿಯೇಷನ್​ ಕಂಪನಿಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಹಾಗೂ ಬೆಲೆಯ ವಿವರವನ್ನು ಎನ್​ಡಿಎ ಸರ್ಕಾರ ನೀಡಬೇಕು ಎಂದು ಅರ್ಜಿದಾರರು ಕೇಳಿದ್ದರು. ಅಲ್ಲದೆ, ಯುಪಿಎ ಸರ್ಕಾರದ ಅವಧಿಯಲ್ಲಿ 126 ಯುದ್ಧ ವಿಮಾನ ಖರೀದಿ ಮಾಡಿದ್ದಕ್ಕಿಂತಲೂ ಹೆಚ್ಚು ಹಣವನ್ನು ಎನ್​ಡಿಎ 36 ವಿಮಾನ ಖರೀದಿಗೆ ವಿನಿಯೋಗಿಸಿದೆ ಎಂದು ಆರೋಪಿಸಿದ್ದರು. ಈ ಒಪ್ಪಂದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ, ರಾಷ್ಟ್ರದ ಭದ್ರತೆ ದೃಷ್ಟಿಯಿಂದ ವಿಮಾನ ಖರೀದಿ ಬೆಲೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಅದನ್ನು ಸೀಲ್​ ಮಾಡಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್​ಗೆ ನೀಡಲಾಗಿದೆ ಎಂದು ಹೇಳಿತ್ತು. ಅದರ, ಬೆಲೆ 59,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

 

 

ರಫೇಲ್ ಡೀಲ್ ತನಿಖೆ ಇಂದು ಸುಪ್ರೀಂ ತೀರ್ಪು

ಮೇಲ್ಮನೆ ಕಲಾಪ: ರಾಮಮಂದಿರ, ರಫೇಲ್​ ಡೀಲ್​, ಸ್ವಾಯತ್ತ ಸಂಸ್ಥೆಗಳ ಚರ್ಚೆಗೆ ಶಿವಸೇನೆ, ಕಾಂಗ್ರೆಸ್​, ಟಿಎಂಸಿಯಿಂದ ನೋಟಿಸ್​

ರಫೇಲ್​ ಡೀಲ್​ ವಿವಾದ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್​

ರಫೇಲ್ ಗುಟ್ಟು ರಟ್ಟು!

Leave a Reply

Your email address will not be published. Required fields are marked *