ಬಿಜೆಪಿ ರಥಯಾತ್ರೆ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ನಡೆಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂಬ ಬಿಜೆಪಿಯ ಮನವಿಯನ್ನು ಸುಪ್ರೀಂ ಕೋರ್ಟ್​ ಸೋಮವಾರ ತಳ್ಳಿಹಾಕಿದೆ.

‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಹೆಸರಿನ ಬಿಜೆಪಿಯ ರಥಯಾತ್ರೆಗೆ ಅವಕಾಶ ನಿರಾಕರಿಸಿ ಕಲ್ಕತ್ತಾ ಹೈಕೋರ್ಟ್​ನ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಅಲ್ಲದೆ, ಸುಪ್ರೀಂ ಕೋರ್ಟ್​ ರಜಾ ಕಾಲದ ಪೀಠವೇ ತುರ್ತಾಗಿ ಅರ್ಜಿಯ ವಿಚಾರಣೆ ನಡೆಸಬೇಕು ಎಂದೂ ಅದು ಕೋರಿತ್ತು. ಆದರೆ, ಈ ಕೋರಿಕೆ ತಳ್ಳಿ ಹಾಕಿರುವ ಕೋರ್ಟ್​ ಸುಪ್ರೀಂ ಕೋರ್ಟ್​ ಮರು ಆರಂಭಗೊಳ್ಳುವ ಜ.2ರಂದೇ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಪಶ್ಚಿಮ ಬಂಗಾಳದ ಮೂರು ಪ್ರದೇಶಗಳಿಂದ ರಥಯಾತ್ರೆಯನ್ನು ಆರಂಭಿಸಿ ಕೋಲ್ಕತದಲ್ಲಿ ಮುಕ್ತಾಯಗೊಳ್ಳುವಂತೆ ಬಿಜೆಪಿ ಯೋಜನೆ ರೂಪಿಸಿತ್ತು. ಆದರೆ, ಯಾತ್ರೆ ನಡೆದರೆ ರಾಜ್ಯದಲ್ಲಿ ಕೋಮುಗಲಭೆಗಳು ನಡೆಯುವ ಸಂಭವವಿದೆ ಎಂಬ ಕಾರಣಕ್ಕೆ ಮಮತಾ ಬ್ಯಾನರ್ಜಿ ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿದೆ.

ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಕಲ್ಕತ್ತಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಕಳೆದ ಗುರುವಾರ ಕೋರ್ಟ್​ನ ಏಕಸದಸ್ಯ ಪೀಠ ಯಾತ್ರೆ ನಡೆಸಲು ಷರತ್ತು ಬದ್ಧ ಒಪ್ಪಿಗೆ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ವಿಭಾಗೀಯ ಪೀಠ ರಥಯಾತ್ರೆಗೆ ಅನುಮತಿ ನೀಡಿದ್ದ ಆದೇಶವನ್ನು ವಜಾಗೊಳಿಸಿತ್ತು.

ಈಗ ಈ ವಿಚಾರ ಸುಪ್ರೀಂ ಕೋರ್ಟ್​ನ ಮೆಟ್ಟಿಲೇರಿದ್ದು, ತ್ವರಿತ ವಿಚಾರಣೆಯ ಅಪೇಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಹೀಗಾಗಿ ಜ. 2 ರ ವರೆಗೆ ಕಾಯಲೇಬೇಕಿದೆ.Leave a Reply

Your email address will not be published. Required fields are marked *