ಅಲೋಕ್​ ವರ್ಮಾ ವಜಾಗೊಳಿಸಿದ್ದು ಆತುರದ ನಿರ್ಧಾರ: ಸುಪ್ರೀಂ ಮಾಜಿ ನ್ಯಾಯಮೂರ್ತಿ ಪಟ್ನಾಯಕ್​

ನವದೆಹಲಿ: ಅಲೋಕ್​ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದ್ದು ತುಂಬ ಆತುರದ ನಿರ್ಧಾರ ಎಂದು ಸುಪ್ರೀಂಕೋರ್ಟ್​ ಮಾಜಿ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್​ ಹೇಳಿದ್ದಾರೆ.

ಅಲೋಕ್​ ವರ್ಮಾ ವಿರುದ್ಧ ಭ್ರಷ್ಟಾಚಾರದ ತನಿಖೆ ನಡೆಸಿದ ಎಸ್​ವಿಸಿ ಸಂಸ್ಥೆಯ ಮೇಲ್ವಿಚಾರಕರಾಗಿರುವ ಪಟ್ನಾಯಕ್​ ಮಾಧ್ಯಮದೊಂದಿಗೆ ಮಾತನಾಡಿ, ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಪ್ರಧಾನಿ ಮೋದಿ ನೇತೃತ್ವದ ಸಮಿತಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದು ತರಾತುರಿಯ ನಿರ್ಧಾರವೆಂದು ತೋರುತ್ತದೆ ಎಂದು ತಿಳಿಸಿದ್ದಾರೆ.

ವರ್ಮಾ ಅವರ ವಿರುದ್ಧದ ತನಿಖೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಆಸ್ಥಾನಾ ಅವರ ದೂರುಗಳನ್ನು ಆಧರಿಸಿತ್ತು. ಸಿವಿಸಿಯಿಂದ ಕಳುಹಿಸಲಾದ ವರದಿಗೆ ಆಸ್ಥಾನಾ ಸಹಿ ಮಾಡಿದ್ದರು. ಆದರೆ, ತನಿಖೆ ವೇಳೆ ಅವರ ಉಪಸ್ಥಿತಿ ಇರಲಿಲ್ಲ ಎಂದು ಹೇಳಿದ್ದಾರೆ.

ಅಲೋಕ್​ ವರ್ಮಾ ಅವರನ್ನು ಗುರುವಾರ ಹುದ್ದೆಯಿಂದ ವಜಾಗೊಳಿಸಿ ಅಗ್ನಿಶಾಮಕ ದಳದ ಡಿಜಿಯನ್ನಾಗಿ ನೇಮಿಸಲಾಗಿತ್ತು. ಆದರೆ, ಅದನ್ನು ಒಪ್ಪದ ಅಲೋಕ್​ ವರ್ಮಾ ರಾಜೀನಾಮೆ ನೀಡಿದ್ದರು.