ಶ್ರೀಶಾಂತ್ ಮೇಲಿನ ಆಜೀವ ನಿಷೇಧ ತೆರವು

ನವದೆಹಲಿ: ಭಾರತೀಯ ಕ್ರಿಕೆಟ್ ಹಾಗೂ ಬಿಸಿಸಿಐನಲ್ಲಿ ಬಹಳಷ್ಟು ದೊಡ್ಡ ಬದಲಾವಣೆಗೆ ಕಾರಣವಾಗಿದ್ದ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿ ಶಾಂತಕುಮಾರನ್ ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ.

ಆದರೆ, ಮುಂದಿನ ಮೂರು ತಿಂಗಳ ಒಳಗಾಗಿ ಎಸ್.ಶ್ರೀಶಾಂತ್ ಮೇಲಿನ ಸ್ಪಾಟ್ ಫಿಕ್ಸಿಂಗ್ ಆರೋಪದ ಕುರಿತಾಗಿ ಹೊಸ ಶಿಕ್ಷೆಯನ್ನು ಬಿಸಿಸಿಐ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಮ್ಮ ಮೇಲಿನ ಕ್ರಿಮಿನಲ್ ಮೊಕದ್ದಮೆ ರದ್ದಾಗಿರುವ ಕಾರಣ, ತಮಗೆ ಯಾವುದೇ ಶಿಕ್ಷೆಯನ್ನು ನೀಡಬಾರದು ಎಂದು ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ಸವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಕೆಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠವು 36 ವರ್ಷದ ಕ್ರಿಕೆಟಿಗ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸುವ ಮಹತ್ವದ ತೀರ್ಪು ನೀಡಿತು. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಸಿಸಿಐ , ಮುಂದಿನ ಆಡಳಿತಾಧಿಕಾರಿಗಳ ಸಮಿತಿಯ(ಸಿಒಎ) ಸಭೆಯಲ್ಲಿ ರ್ಚಚಿಸುವುದಾಗಿ ಹೇಳಿದೆ.‘ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದೇಶದ ಪ್ರತಿ ಕೈಗೆ ಸಿಗಬೇಕಿದೆ. ಮುಂದಿನ ಸಿಒಎ ಸಭೆಯಲ್ಲಿ ಈ ಬಗ್ಗೆ ಖಂಡಿತಾ ತೀರ್ವನಕ್ಕೆ ಬರಲಿದ್ದೇವೆ’ ಎಂದು ಸಿಒಎ ಅಧ್ಯಕ್ಷ ವಿನೋದ್ ರಾಯ್ ತಿಳಿಸಿದ್ದಾರೆ.

ಮಾರ್ಚ್ 18ರಂದು ಸಿಒಎ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ(ಐಸಿಸಿ) ಅಧಿಕಾರಿಗಳ ನಡುವೆ ಉದ್ದೀಪನ ನಿಗ್ರಹ ನೀತಿಯ ಕುರಿತ ಸಭೆ ನಿಗದಿಯಾಗಿದ್ದು, ಅದೇ ದಿನ ಶ್ರೀಶಾಂತ್ ವಿಚಾರದ ಬಗ್ಗೆ ರ್ಚಚಿಸುವ ಸಾಧ್ಯತೆಯಿದೆ. ಬಿಸಿಸಿಐನಲ್ಲೀಗ ಹೊಸ ಒಂಬುಡ್ಸ್​ಮನ್ ಡಿಕೆ ಜೈನ್ ಹಾಗೂ ಆಮಿಕಸ್ ಕ್ಯೂರಿ ಪಿಎಸ್ ನರಸಿಂಹ ಅವರಿರುವ ಕಾರಣ ಕ್ಷಿಪ್ರವಾಗಿ ತೀರ್ಮಾನ ಹೊರಬೀಳಬಹುದು ಎನ್ನಲಾಗುತ್ತಿದೆ. ಶ್ರೀಶಾಂತ್ ಮೇಲೆ ಬಿಸಿಸಿಐನ ಕಾನೂನಿನ ಪ್ರಕಾರವೇ ಆಜೀವ ನಿಷೇಧ ಹೇರಲಾಗಿದೆ ಎಂದು ಕ್ರಿಕೆಟ್ ಮಂಡಳಿ ನ್ಯಾಯಪೀಠದ ಮುಂದೆ ವಾದಿಸಿತ್ತು. ಆದರೆ, ಶ್ರೀಶಾಂತ್ ಪರ ವಕೀಲ ಸಲ್ಮಾನ್ ಖುರ್ಷಿದ್, ‘ಫಿಕ್ಸಿಂಗ್ ಕುರಿತಾಗಿ ತಮಗೆ ಬಂದ ಆಹ್ವಾನವನ್ನು ಬಿಸಿಸಿಐಗೆ ತಿಳಿಸದೇ ಇರುವುದು ಮಾತ್ರವೇ ಶ್ರೀಶಾಂತ್ ಮಾಡಿದ ತಪು್ಪ’ ಎಂದು ವಾದಿಸಿದ್ದರು. ಮಾಜಿ ನಾಯಕ ಅಜರುದ್ದೀನ್​ಗೆ ನೀಡಿದ ಆಜೀವ ನಿಷೇಧವನ್ನು ತೆರವು ಮಾಡಲಾಗಿದೆ. ಪಾಕಿಸ್ತಾನದ ಸಲೀಂ ಮಲೀಕ್​ಗೂ ನೀಡಿದ ಇದೇ ರೀತಿಯ ಶಿಕ್ಷೆಯನ್ನು ತೆಗೆದುಹಾಕಲಾಗಿದೆ ಎಂದು ಖುರ್ಷಿದ್ ವಾದಿಸಿದರು.

ಶ್ರೀಶಾಂತ್ ಸಂತಸ: ಲಿಯಾಂಡರ್ ಪೇಸ್ ಅವರಿಗೆ 42ನೇ ವಯಸ್ಸಿನಲ್ಲಿ ಗ್ರಾಂಡ್ ಸ್ಲಾಂ ಗೆಲ್ಲಲು ಸಾಧ್ಯ ಎಂದಾದರೆ ನನಗೂ ಕ್ರಿಕೆಟ್ ಆಡಬಹುದು. ಇದು ಸುಪ್ರೀಂ ಕೋರ್ಟ್ ಆದೇಶವಾಗಿರುವುದರಿಂದ ಬಿಸಿಸಿಐ ನ್ಯಾಯ ನೀಡುವ ವಿಶ್ವಾಸವಿದೆ ಎಂದು 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಶ್ರೀಶಾಂತ್ ಹೇಳಿದ್ದಾರೆ.

ಕ್ಲಬ್ ಕ್ರಿಕೆಟ್ ಆಡಬಹುದು..

ಅಕಸ್ಮಾತ್ ಬಿಸಿಸಿಐ ಒಟ್ಟಾರೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಅವಧಿಗೆ ಪ್ರಕಟಿಸಿದರೆ ಶ್ರೀಶಾಂತ್​ಗೆ ಕ್ಲಬ್ ಕ್ರಿಕೆಟ್​ನಲ್ಲಿ ಮಾತ್ರವೇ ಆಡಬಹುದು ಎನ್ನಲಾಗುತ್ತಿದೆ. ‘ಶ್ರೀಶಾಂತ್ 6 ಅಮೂಲ್ಯ ವರ್ಷಗಳನ್ನು ನಷ್ಟ ಕಂಡಿದ್ದಾರೆ. ಅಕಸ್ಮಾತ್ ಬಿಸಿಸಿಐ ನಿಷೇಧವನ್ನು ತೆರವುಗೊಳಿಸಿದರೂ, ಶ್ರೀಶಾಂತ್ ಪ್ರಥಮ ದರ್ಜೆ ಕ್ರಿಕೆಟ್ ಆಡಬಹುದು ಎಂದು ನನಗೆ ಅನಿಸುತ್ತಿಲ್ಲ. ಆದರೆ ಇಂಗ್ಲೆಂಡ್​ನಲ್ಲಿ ಕ್ಲಬ್ ಕ್ರಿಕೆಟ್ ಅಥವಾ ಕೋಚ್, ಮೆಂಟರ್ ಆಗಿ ಶ್ರೀಶಾಂತ್ ಮುಂದುವರಿಯಬಹುದು ಎಂದು ಕೇರಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿ ಟಿಸಿ ಮ್ಯಾಥ್ಯೂ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಕ್ಲಬ್ ಕ್ರಿಕೆಟ್​ನಲ್ಲಿ ಆಡಲು ಶ್ರೀಶಾಂತ್ ಅನುಮತಿ ಕೇಳಿದ್ದಾಗ ಬಿಸಿಸಿಐ ನಿರಾಕರಿಸಿತ್ತು.

ಇದು ಸುಪ್ರೀಂಕೋರ್ಟ್ ಆದೇಶ. ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸಿಒಎ ಸಭೆಯಲ್ಲಿ ಶ್ರೀಶಾಂತ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಶ್ರೀಶಾಂತ್ ಮರಳಿ ಕ್ರಿಕೆಟಿಗೆ ಬರುವ ವಿಚಾರದಲ್ಲಿ ನಾನು ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ.

|ಸಿಕೆ ಖನ್ನಾ ಬಿಸಿಸಿಐ ಹಂಗಾಮಿ ಅಧ್ಯಕ್ಷ

ಶ್ರೀಶಾಂತ್ ಫಿಕ್ಸಿಂಗ್​ಟೈಮ್ ಲೈನ್

2013 ಮೇ 16: ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ರಾಜಸ್ಥಾನ ರಾಯಲ್ಸ್​ನ ಎಸ್.ಶ್ರೀಶಾಂತ್, ಅಜಿತ್ ಚಂಡಿಲಾ, ಅಂಕಿತ್ ಚೌಹಾಣ್​ರನ್ನು ಬಂಧಿಸಿದ ದೆಹಲಿ ಪೊಲೀಸ್. ತಕ್ಷಣದಿಂದಲೇ ಬಿಸಿಸಿಐನಿಂದ ಆಟಗಾರರ ಅಮಾನತು.

ಮೇ 17: ಐದು ದಿನದ ನ್ಯಾಯಾಂಗ ಬಂಧನದ ವೇಳೆ ಸ್ಪಾಟ್ ಫಿಕ್ಸಿಂಗ್ ಒಪ್ಪಿಕೊಂಡ ಶ್ರೀಶಾಂತ್.

ಜೂ. 11: ದೆಹಲಿ ಹೈಕೋರ್ಟ್​ನಿಂದ ಶ್ರೀಶಾಂತ್​ಗೆ ಜಾಮೀನು ಮಂಜೂರು.

ಸೆ. 13: ಬಿಸಿಸಿಐನಿಂದ ಶಿಕ್ಷೆ ಪ್ರಕಟ. ಶ್ರೀಶಾಂತ್ ಹಾಗೂ ಅಂಕಿತ್ ಚೌಹಾಣ್​ಗೆ ಆಜೀವ ನಿಷೇಧ.

2015 ಜೂ.15: ಶ್ರೀಶಾಂತ್ ಸೇರಿದಂತೆ ರಾಜಸ್ಥಾನ ರಾಯಲ್ಸ್ ಆಟಗಾರರ ಮೇಲಿನ ಕ್ರಿಮಿನಲ್ ಚಾರ್ಜ್​ಅನ್ನು ರದ್ದು ಮಾಡಿದ ದೆಹಲಿ ಹೈಕೋರ್ಟ್

2017 ಆಗಸ್ಟ್ 7: ಬಿಸಿಸಿಐನ ಆಜೀವ ನಿಷೇಧ ಶಿಕ್ಷೆಯನ್ನು ರದ್ದು ಮಾಡಿದ ಕೇರಳ ಹೈ ಕೋರ್ಟ್. ಬಿಸಿಸಿಐನಿಂದ ಮೇಲ್ಮನವಿ.

ಅಕ್ಟೋಬರ್ 17: ತೀರ್ಪು ಪರಿಷ್ಕರಿಸಿದ ಕೇರಳ ಹೈಕೋರ್ಟ್. ಬಿಸಿಸಿಐನ ನಿಷೇಧ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಕೋರ್ಟ್. ಶ್ರೀಶಾಂತ್​ಗೆ ಮತ್ತೆ ನಿಷೇಧ ಶಿಕ್ಷೆ.

2018 ಮೇ 15: ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್ ಆಡಲು ಶ್ರೀಶಾಂತ್ ಮಾಡಿದ ಮನವಿಗೆ ಒಪ್ಪಿಗೆ ನೀಡದ ಬಿಸಿಸಿಐ.

2019 ಮಾ. 15: ಆಜೀವ ನಿಷೇಧ ಶಿಕ್ಷೆ ತೆರವು ಮಾಡಿದ ಸುಪ್ರೀಂ ಕೋರ್ಟ್. 3 ತಿಂಗಳ ಒಳಗಾಗಿ ಶಿಕ್ಷೆ ಪುನರ್​ಪರಿಶೀಲನೆ ಮಾಡಲು ಬಿಸಿಸಿಐಗೆ ಸೂಚನೆ.