ರಫೇಲ್ ಒಪ್ಪಂದದ ತೀರ್ಪಿನ ಮರುಪರಿಶೀಲನೆಗೆ ವಿಶೇಷ ದಾಖಲೆಗಳ ಪರಿಗಣನೆಗೆ ಸುಪ್ರೀಂ ಅಸ್ತು, ಕೇಂದ್ರಕ್ಕೆ ಮುಖಭಂಗ

ನವದೆಹಲಿ: ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಗಳ ಬಗೆಗಿನ ವಿಚಾರಣೆ ನಡೆಸಿದ ಕೋರ್ಟ್‌, ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಸೋರಿಕೆಯಾಗಿದ್ದ ಮೂರು ದಾಖಲೆಗಳನ್ನು ಸಾಕ್ಷಿಯಾಗಿ ಒಪ್ಪಿಕೊಂಡಿದೆ ಮತ್ತು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ.

ಎನ್‌ಡಿಎ ಸರ್ಕಾರವು ಫ್ರಾನ್ಸ್​ನಿಂದ 36 ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ಕಂಡುಬಂದಿದೆ ಎಂದು ಸಲ್ಲಿಸಲಾಗಿದ್ದ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದ ಸುಪ್ರೀಂಕೋರ್ಟ್ 2018ರ ಡಿ.14ರಂದು ಎಲ್ಲ ಮೇಲ್ಮನವಿಗಳನ್ನು ವಜಾಗೊಳಿಸಿತ್ತು.

ರಫೇಲ್ ಒಪ್ಪಂದದ ಜಂಟಿ ಸಂಸದೀಯ ಸಮಿತಿ ತನಿಖೆಗೆ ನಿರಾಕರಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರೊಂದಿಗೆ ವಕೀಲ ಪ್ರಶಾಂತ್ ಭೂಷಣ್ ಅವರು ಸೋರಿಕೆ ದಾಖಲೆಗಳೊಂದಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಸರ್ಕಾರ ಇದಕ್ಕೆ ಪ್ರಾಥಮಿಕ ಆಕ್ಷೇಪಣೆ ಸಲ್ಲಿಸಿದ್ದು, ರಫೇಲ್ ಬಗೆಗಿನ ತೀರ್ಪಿನ ಮರುಪರಿಶೀಲನೆಗೆ ವಿಶೇಷ ದಾಖಲೆಗಳನ್ನು ಪರಿಗಣಿಸಬಾರದು ಎಂದು ಮನವಿ ಮಾಡಿತ್ತು.

ನಂತರ ಫೆ. 21 ರಂದು ಮತ್ತೆ ರಫೇಲ್ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. (ಏಜೆನ್ಸೀಸ್)