ಸರ್ಕಾರಗಳು ಮಹಿಳಾಕೇಂದ್ರಿತವಾಗಿ ವಿವಿಧ ಯೋಜನೆಗಳನ್ನು ರೂಪಿಸುತ್ತಿರುತ್ತವೆ. ರಾಜ್ಯ ಸರ್ಕಾರ ಈಗ ಜಾರಿಗೆ ಮುಂದಾಗಿರುವ ಯೋಜನೆಯೊಂದು ಗಮನ ಸೆಳೆಯುವಂತಿದೆ. ರಾಜ್ಯದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಹೊಸ ಯೋಜನೆ ರೂಪಿಸಿದ್ದು, ಉದ್ಯೋಗಾಧಾರಿತ ಕೌಶಲ ತರಬೇತಿ ನೀಡಲು ಮುಂದಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸಹಯೋಗದಲ್ಲಿ ಆಯ್ದ 100 ಗ್ರಾಪಂಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಪ್ರತಿ ಗ್ರಾಪಂನಲ್ಲಿ ತಲಾ 300 ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. ಈ ಕುರಿತು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ವಿವಿಧ ಕೌಶಲಗಳಲ್ಲಿ ತರಬೇತಿ ಪಡೆದು, ಆದಾಯ ಗಳಿಸಿ, ತನ್ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವಲ್ಲಿ ಈ ಯೋಜನೆ ನೆರವಾಗಬಹುದೆಂದು ಆಶಿಸಬಹುದಾಗಿದೆ.
ಸಂಜೀವಿನಿ ಯೋಜನೆಯಡಿ ರಚಿಸಲಾಗಿರುವ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರ ಆಸಕ್ತಿ ಹಾಗೂ ಆಕಾಂಕ್ಷೆಗೆ ಅನುಗುಣವಾಗಿ ಕೌಶಲ ತರಬೇತಿ ನೀಡಿ, ಸ್ವಉದ್ಯೋಗಕ್ಕೆ ಅವರನ್ನು ಅಣಿಗೊಳಿಸುವುದು; ಗ್ರಾಮೀಣ ಮಹಿಳೆಯರು ಸ್ಥಳೀಯ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿಸುವುದು- ಮುಂತಾದ ಉದ್ದೇಶಗಳನ್ನು ಈ ಯೋಜನೆ ಹೊಂದಿದೆ. ಕಸೂತಿ, ಟೇಲರಿಂಗ್, ಬ್ಯಾಗ್ ತಯಾರಿಕೆ, ಮಸಾಲೆ ಪದಾರ್ಥಗಳ ತಯಾರಿಕೆ, ರೊಟ್ಟಿ ತಯಾರಿಕೆ ಮುಂತಾದವು ಸೇರಿದಂತೆ ಆದಾಯ ಬರುವ ವಿವಿಧ ಚಟುವಟಿಕೆಗಳನ್ನು ನಡೆಸುವ ಅವಕಾಶ ಈ ಮುಖಾಂತರ ಸಿಗಲಿದೆ.
ಇಲ್ಲಿ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ. ಹೀಗೆ ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರಕದೆ ಹೋದರೆ, ಯೋಜನೆಯ ಒಟ್ಟಾರೆ ಉದ್ದೇಶ ಈಡೇರುವುದು ಕಷ್ಟವಾಗುತ್ತದೆ. ಏಕೆಂದರೆ, ಸ್ಥಳೀಯ ಉತ್ಪನ್ನಗಳಿಂದ ತಯಾರಿಸಿದ ಉತ್ಪನ್ನಗಳಿಗೆ ಕೇವಲ ಆಯಾ ಭಾಗದ ಮಾರುಕಟ್ಟೆಯನ್ನು ನಂಬಿಕೊಂಡರೆ ಹೆಚ್ಚಿನ ಆದಾಯ ಗಳಿಕೆ ಕಷ್ಟಸಾಧ್ಯ. ಆದ್ದರಿಂದ ಹೊರಗಿನ ಮಾರುಕಟ್ಟೆಯನ್ನು ಹುಡುಕುವುದು ಅನಿವಾರ್ಯವಾಗುತ್ತದೆ.
ಈಗ ತಂತ್ರಜ್ಞಾನದ ಬೆಂಬಲ ಇರುವುದರಿಂದಾಗಿ ಇದೇನು ಕಷ್ಟದ ಕೆಲಸವಲ್ಲ. ಆ ದಿಕ್ಕಿನಲ್ಲಿ ಸೂಕ್ತ ಪ್ಲಾನಿಂಗ್ ಮತ್ತು ಜಾರಿಯ ಬದ್ಧತೆ ಬೇಕಾಗುತ್ತದಷ್ಟೆ. ಕರೊನಾ ಕಾಲದಲ್ಲಿ ಸ್ವ ಉದ್ಯೋಗ ಹಾಗೂ ಗೃಹೋದ್ಯಮ ಹೊಸದೊಂದು ಆಯಾಮವನ್ನು ಪಡೆದ ಮಾದರಿ ನಮ್ಮೆದುರಿಗಿದೆ. ಕರೊನಾ ನಿರ್ಬಂಧದ ಕಾರಣಕ್ಕೆ ಮನೆಯಲ್ಲೇ ಉಳಿಯಬೇಕಾಗಿ ಬಂದಿದ್ದರಿಂದಾಗಿ ಹಾಗೂ ಆಗ ಕೆಲವರ ಕೆಲಸವೂ ಹೋಗಿದ್ದರಿಂದಾಗಿ, ಆದಾಯಕ್ಕೆ ಹೊಸ ಮಾರ್ಗದ ಅನ್ವೇಷಣೆ ನಡೆಯಿತು.
ಆಹಾರ ಪದಾರ್ಥಗಳು ಹಾಗೂ ಕರಕುಶಲ ವಸ್ತುಗಳನ್ನು ಮನೆಯಲ್ಲೇ ತಯಾರಿಸಿ ಸಾಂಪ್ರದಾಯಿಕ ಮಾರುಕಟ್ಟೆ ಜೊತೆಗೆ ಆನ್ಲೈನ್ ಮುಖಾಂತರವೂ ಮಾರುಕಟ್ಟೆಯನ್ನು ಕಂಡುಕೊಂಡ ಎಷ್ಟೋ ನಿದರ್ಶನಗಳಿವೆ. ಸಾವಿರಾರು ಜನರು ಸಾಮಾಜಿಕ ಜಾಲತಾಣಗಳ ಸೂಕ್ತ ಬಳಕೆಯಿಂದ ಮಾರುಕಟ್ಟೆಗೆ ಪ್ರವೇಶಾವಕಾಶ ಪಡೆದರು. ಈ ಮೇಲೆ ಉಲ್ಲೇಖಿಸಿದ ಯೋಜನೆ ಯಶಸ್ವಿಯಾಗಬೇಕಾದಲ್ಲಿ ಮಾರುಕಟ್ಟೆ ತಂತ್ರದತ್ತಲೂ ಗಮನ ಅಗತ್ಯ.