ವಿಚಾರಧಾರೆ, ಸಿದ್ಧಾಂತ ನೋಡಿ ಅಭ್ಯರ್ಥಿ ಬೆಂಬಲಿಸಿ: ಎಲ್ ಹನುಮಂತಯ್ಯ ಮನವಿ

ಬಳ್ಳಾರಿ: ಲೋಕಸಭಾ ಚುನಾವಣೆ ಎರಡು ವಿಚಾರಧಾರೆಗಳ ಚುನಾವಣೆಯಾಗಿದೆ. ಕ್ಷೇತ್ರದ ಜನರು ಸಿದ್ಧಾಂತಗಳನ್ನು ನೋಡಿ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಸುದ್ದಿಗೋಷ್ಢಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೊದಲು ಸಂಸದರನ್ನು ಆಯ್ಕೆ ಮಾಡಬೇಕು. ಆ ಬಳಿಕ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷೀಯ ಮಾದರಿಯಲ್ಲಿ ಚುನಾವಣೆ ನಡೆಸುವ ಪ್ರಯತ್ನ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರಿ ನಡುವಣ ಚುನಾವಣೆಯಾಗಿದೆ ಎಂದು ಆರೋಪಿಸಿದರು.

ಮೋದಿ ಸಂಪುಟದ ಯಾವ ಸಚಿವರು ಕೂಡ ಸ್ವತಂತ್ರವಾಗಿ ಕೆಲಸ ಮಾಡಿಲ್ಲ. ವಿದೇಶಾಂಗ, ಹಣಕಾಸು ಇಲಾಖೆಯ ಇತ್ಯಾದಿ ನಿರ್ಧಾರಗಳನ್ನು ಇಲಾಖೆಯ ಸಚಿವರ ಗಮನಕ್ಕೆ ಇಲ್ಲದಂತೆ ಸ್ವತಃ ಮೋದಿ ಕೈಗೊಂಡಿದ್ದಾರೆ. ಜನರ ಕಲ್ಯಾಣ ಕಾರ್ಯಕ್ರಮಗಳ ಜತೆಗೆ ದೇಶದ ಆರ್ಥಿಕ ಅಭಿವೃದ್ಧಿ ಆಗಬೇಕು. ಆದರೆ, ಆರ್ಥಿಕ ಅಭಿವೃದ್ಧಿ ಹಾಗೂ ಕಾರ್ಪೊರೇಟ್ ಕಂಪನಿಗಳ ಅಭಿವೃದ್ಧಿ ಬಿಜೆಪಿಯ ಆಡಳಿತ ನೀತಿಯಾಗಿದೆ. ಮೋದಿ ಜನರನ್ನು ಯಾಮಾರಿಸುವ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯವರು ಬಡವರ ನಿರ್ಮೂಲನೆಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ದೂರಿದರು.

ಗಡಿ ಭಯೋತ್ಪಾದನೆ ದೇಶಕ್ಕೆ ಹೊಸದಲ್ಲ. ಮೋದಿ ಪ್ರಧಾನಿಯಾಗಿದ್ದಾರೆ ಎಂದು ಭಯೋತ್ಪಾದನೆ ನಿಂತಿಲ್ಲ ಹಾಗೂ ಮುಂದೆ ನಿಲ್ಲುತ್ತೆ ಎಂಬ ಭರವಸೆ ಇಲ್ಲ. ರಾಷ್ಟ್ರೀಯ ಭದ್ರತಾ ವಿಚಾರವನ್ನು ರಾಜಕೀಯಗೊಳಿಸಿದರೆ ಮುಂದಿನ ದಿನಗಳಲ್ಲಿ ಸೇನಾಡಳಿತದ ವಿಚಾರ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ. ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಸೇನಾ ವಿಚಾರವನ್ನು ರಾಜಕೀಯಗೊಳಿಸುವುದರಿಂದ ಯೋಧರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂದರು.

ಸಿಎಂ ಕುಮಾರಸ್ವಾಮಿ ಸ್ವಾಮಿ ಯೋಧರ ಬಗ್ಗೆ ಅವಹೇಳನ ಮಾಡಿಲ್ಲ. ಬಡವರು ಸೇನೆ ಸೇರುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಸರಿಯಾಗಿದೆ. ರೈತರು, ಕಾರ್ಮಿಕರು ದೇಶಭಕ್ತರಲ್ಲವೇ? ಸ್ವಚ್ಛ ಭಾರತ ಯೋಜನೆಯ ಜಾಹೀರಾತಿಗೆ ಖರ್ಚು ಮಾಡಿದ ಅರ್ಧದಷ್ಟು ಹಣವನ್ನು ಕೂಡ ಪೌರ ಕಾರ್ಮಿಕರ ಅಭಿವೃದ್ಧಿಗೆ ಬಳಸಿಲ್ಲ. ನ್ಯಾಯ ಯೋಜನೆಗೆ ಕೇಂದ್ರ ಬಜೆಟ್ಟಿನ ಶೇ 12ರಷ್ಟು ಬೇಕಾಗುತ್ತದೆ. ಈ ಯೋಜನೆ ಕಾರ್ಯಸಾಧುವಾದದ್ದು ಎಂದು ದೇಶದ ಆರ್ಥಿಕ ತಜ್ಞರು ಹೇಳಿದ್ದಾರೆ. ಎಲ್ಲರಿಗೂ ಆರೋಗ್ಯ ರಕ್ಷಣೆಗಾಗಿ ಹೆಲ್ತ್ ಕೇರ್ ಯೋಜನೆ ಜಾರಿಗೊಳಿಸಲಾಗುತ್ತದೆ.

ಮೋದಿ ಪ್ರಧಾನಿಯಾದ ಬಳಿಕ ಸ್ವಿಸ್ ಬ್ಯಾಂಕಿನಲ್ಲಿ ದೇಶದ ಹಣ ಜಮಾ ಪ್ರಮಾಣ ಶೇ 54ರಷ್ಟು ಹೆಚ್ಚಿದೆ. ಕಪ್ಪು ಹಣ ತಡೆಯುವುದು ಮೋದಿಯಿಂದ ಸಾಧ್ಯವಾಗಿಲ್ಲ. ಸ್ವಾಯತ್ತ ಸಂಸ್ಥೆಗಳು ಉಳಿದರೆ ದೇಶ ಉಳಿಯಲಿದೆ.
ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದರೆ ಯಾರು ತಡೆಯಲು ಸಾಧ್ಯ. ಸಿದ್ದರಾಮಯ್ಯ ಸಿಎಂ ಆಗಬೇಕೆಂಬುದು ಶಾಸಕರ ಹಾಗೂ ಪಕ್ಷದ ಇಚ್ಛೆಯಾಗಿದೆ. ಚುನಾವಣೆ ಬಳಿಕ ಸರ್ಕಾರ ಬೀಳುವುದಿಲ್ಲ ಹಾಗೂ ನಾಯಕತ್ವ ಬದಲಾವಣೆಯಾಗುವುದಿಲ್ಲ ಎಂದು ಎಲ್.ಹನುಮಂತಯ್ಯ ಹೇಳಿದರು.

ಡಿಸಿಸಿ ಕಾರ್ಯದರ್ಶಿ ವೆಂಕಟೇಶ್ ಹೆಗಡೆ, ಎಲ್.ಮಾರೆಣ್ಣ, ದುರುಗಪ್ಪ ತಳವಾರ, ಎರುಕಲಸ್ವಾಮಿ, ಗಂಗಾಧರ, ಕುಮಾರಸ್ವಾಮಿ, ವೆಂಕಟೇಶಮೂರ್ತಿ, ಹುಸೇನಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *