ಬೆಂಗಳೂರು: ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಜತೆಗೆ ಪ್ರೋತ್ಸಾಹಧನ ನೀಡಲು ತೀರ್ವನಿಸಿದೆ. ಭತ್ತ, ಶೇಂಗಾ, ತೊಗರಿ, ಬಿಳಿ ಜೋಳ, ರಾಗಿಗೆ ಬೆಂಬಲ ಬೆಲೆ ಅನ್ವಯಿಸಲಿದ್ದು, ತಕ್ಷಣವೇ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿ ನೇತೃತ್ವದ ಟಾಸ್ಕ್ ಫೋರ್ಸ್ ಗಳಿಗೆ ಸೂಚನೆ ನೀಡಿದೆ. ಜತೆಗೆ ಭತ್ತಕ್ಕೆ ಪ್ರತಿ ಕ್ವಿಂಟಾಲ್ಗೆ 200 ರೂ. ಹಾಗೂ ತೊಗರಿಗೆ 300 ರೂ. ಪ್ರೋತ್ಸಾಹಧನ ನೀಡಲು ಸಂಪುಟ ಉಪ ಸಮಿತಿ ನಿರ್ಧರಿಸಿದೆ.
ಈ ಕುರಿತು ಕೃಷಿ ಸಚಿವ ಲಕ್ಷ್ಮಣ ಸವದಿ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತರಿಗೆ ನೆರವಾಗಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಸಮತೋಲನ ಕಾಯ್ದುಕೊಳ್ಳಲು ಬೆಂಬಲ ಬೆಲೆ ಘೋಷಿಸಲಾಗುತ್ತದೆ. ಪ್ರತಿ ರೈತರಿಗೆ ಗರಿಷ್ಠ ಎಷ್ಟು ಪ್ರಮಾಣದಲ್ಲಿ ಖರೀದಿ ಕೇಂದ್ರಕ್ಕೆ ನೀಡಬಹುದೆಂಬ ಮಿತಿ ಇರುತ್ತದೆ ಎಂದರು.
ಎಥೆನಾಲ್ಗೆ ಕೇಂದ್ರದ ಪ್ರೋತ್ಸಾಹ: ಈ ಬಾರಿ ಆಂಧ್ರ, ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಕಬ್ಬು ಬಂಪರ್ ಇಳುವರಿ ಆಗಿದೆ. ಆದರೆ, ಸಕ್ಕರೆ ಬೆಲೆ ಕಡಿಮೆ ಇದ್ದು, ಕಾರ್ಖಾನೆಗಳು ರೈತರಿಗೆ ಒಳ್ಳೆಯ ಬೆಲೆ ಕೊಡುವುದೇ ಕಷ್ಟವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಸಕ್ಕರೆ ರಫ್ತು ಮಾಡಲು ಅವಕಾಶ ನೀಡಿ, ಪ್ರೋತ್ಸಾಹ ನೀಡಲು ಮುಂದಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಮುಂದೆ ಎಥೆನಾಲ್ ತಯಾರಿಕೆ ಪ್ರೋತ್ಸಾಹಿ ಸಲು ಕೇಂದ್ರ ಸೂಚಿಸಿದ್ದು, ಕರ್ನಾಟಕದಲ್ಲಿ ಹಲವು ಕಾರ್ಖಾನೆಗಳು ತಯಾರಿ ಮಾಡಿಕೊಳ್ಳುತ್ತಿವೆ. ಜ್ಯೂಸ್ ಟು ಎಥೆನಾಲ್, ಮೊಲಾಸಿಸ್-ಬಿ ಮತ್ತು ಮೊಲಾಸಿಸ್-ಸಿಗೆ ಪ್ರತ್ಯೇಕ ದರ ನಿಗದಿ ಮಾಡಿ ಯೋಜನೆಗಳನ್ನು ಪ್ರಕಟಿಸಲಾಗಿದೆ. ಎಥೆನಾಲ್ ಉತ್ಪಾದನೆ ಮೂಲಕ ಹೊರ ರಾಜ್ಯಗಳ ಇಂಧನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಪ್ರಯತ್ನಿಸಲಾಗುತ್ತಿದೆ ಎಂದರು.
ಎಲ್ಲೆಲ್ಲಿ, ಏನಿದೆ ಬೆಳೆ ಪರಿಸ್ಥಿತಿ?
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ 13.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. 12.02 ಲಕ್ಷ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ. ಪ್ರಸ್ತುತ ಮಾರುಕಟ್ಟೆ ಯಲ್ಲಿ ಕ್ವಿಂಟಾಲ್ಗೆ 3,950- 5,230 ರೂ. ದರ ಇದೆ. ಪ್ರತಿ ರೈತರಿಂದ 10 ಕ್ವಿಂಟಾಲ್ ತೊಗರಿ ಖರೀದಿ ಪ್ರಮಾಣ ನಿಗದಿಯಾಗಿದೆ.
ಫೆ.20ರವರೆಗೆ ಖರೀದಿಸಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ 3.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದ್ದು, 2.67 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ. ಪ್ರಸ್ತುತ ಧಾರಣೆ ಕ್ವಿಂಟಾಲ್ಗೆ 3,700-4,280 ರೂ. ಇದೆ. ಫೆ.12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರತಿ ರೈತರಿಂದ 15 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ಅಂದಾಜು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 6.18 ಲಕ್ಷ ಮೆಟ್ರಿಕ್ ಟನ್ ಕಡಲೆಕಾಳು ಇಳುವರಿ ನಿರೀಕ್ಷಿಸಲಾಗಿದ್ದು, ಪ್ರತಿ ಕ್ವಿಂಟಾಲ್ 3,500 ರೂ.ವರೆಗೆ ಮಾರಾಟವಾಗುತ್ತಿದೆ.
ಯಾವ ಬೆಳೆಗೆ ಎಷ್ಟು ಬೆಲೆ?
ಸಾಮಾನ್ಯ ಭತ್ತ- ಕ್ವಿಂಟಾಲ್ಗೆ 18,150 ರೂ. ಬೆಂಬಲ ಬೆಲೆ ಜತೆಗೆ 200 ರೂ. ಪ್ರೋತ್ಸಾಹಧನ ಣ ಎ ಗ್ರೇಡ್ ಭತ್ತ- 1,835 ಜತೆಗೆ 200 ರೂ. ಪ್ರೋತ್ಸಾಹ ಧನ ಣ ತೊಗರಿ- 5,800 ರೂ. ಜತೆ 300 ರೂ. ಪ್ರೋತ್ಸಾಹಧನ ಣ ಬಿಳಿಜೋಳ- 2,550 ರೂ. ಣ ಮಾಲ್ದಂಡೆ ಜೋಳ- 2,570 ರೂ. ಣ ರಾಗಿ- 3,150 ರೂ. ಣ ಶೇಂಗಾ- 5.090 ರೂ. ದರ.
ಇಸ್ರೇಲ್ ಕೃಷಿ ಕನಸು
ರಾಜ್ಯದಲ್ಲಿ ಇಸ್ರೇಲ್ ಕೃಷಿ ಪದ್ಧತಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಅದರ ಯಶಸ್ಸು ನೋಡಿಕೊಂಡು ವಿಸ್ತರಿಸಲಾಗುತ್ತದೆ. ಅತಿವೃಷ್ಟಿ ವೇಳೆ ಬೆಳೆ ಪರಿಹಾರ ವಿತರಿಸಲಾಗಿದ್ದು, ಸರಿಯಾದ ದಾಖಲೆ ಕೊಡದ ಪ್ರಕರಣ ಮಾತ್ರ ಬಾಕಿ ಇವೆ. ತಿಂಗಳಾಂತ್ಯಕ್ಕೆ ಎಲ್ಲವೂ ಸರಿಯಾಗಲಿದೆ. ಕೃಷಿ ಬೆಲೆ ಆಯೋಗಕ್ಕೆ ಹೊಸ ನೇಮಕ ಮಾಡಿದ್ದು, ಅವರ ವರದಿ ಪರಿಶೀಲನೆ ನಡೆಸಿ ಅನುಷ್ಠಾನ ಮಾಡಲಾಗುತ್ತಿದೆ.