More

  ಉತ್ತಮ ಸಮಾಜ ನಿರ್ಮಾಣಕ್ಕೆ ಕಾಂಗ್ರೆಸ್ ಬೆಂಬಲಿಸಿ

  ಚಿಕ್ಕಮಗಳೂರು: ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹಾಗೂ ಹಿಂದುಳಿದವರ, ದೀನದಲಿತರ, ಬಡವರ ಬದುಕನ್ನು ಹಸನುಗೊಳಿಸಲು ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡುವ ಮೂಲಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸುವಂತೆ ಶಾಸಕ ಎಚ್.ಡಿ.ತಮ್ಮಯ್ಯ ಮತದಾರರಲ್ಲಿ ಮನವಿ ಮಾಡಿದರು.

  ನಗರದ ವಿಜಯಪುರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮನೆ ಮನೆಗೆ ಕರಪತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ೫ ಗ್ಯಾರಂಟಿಗಳ ಜೊತೆಗೆ ರಾಷ್ಟ್ರೀಯ ಕಾಂಗ್ರೆಸ್ ಬಿಡುಗಡೆ ಮಾಡಿರುವ ೫ ಗ್ಯಾರಂಟಿ ಯೋಜನೆಗಳ ಪ್ರತಿಗಳನ್ನು ಮನೆಗಳಿಗೆ ನೀಡಿ ಮತ ನೀಡುವಂತೆ ಮನವರಿಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಾಗಿ ೫ ನ್ಯಾಯಗಳಾದ ಯುವನ್ಯಾಯ, ರೈತನ್ಯಾಯ, ಪಾಲುದಾರಿಕೆ ನ್ಯಾಯ, ಮಹಿಳಾ ನ್ಯಾಯ, ಶ್ರಮಿಕ ನ್ಯಾಯ ಇವುಗಳ ಗ್ಯಾರಂಟಿ ಕಾರ್ಡನ್ನು ಮತದಾರರಿಗೆ ನೀಡಿ ಮತ ಕೇಳುತ್ತಿದ್ದೇವೆ ಎಂದು ತಿಳಿಸಿದರು.
  ಸರಳ ಸಜ್ಜನಿಕೆ ವ್ಯಕ್ತಿತ್ವದ ಜಯಪ್ರಕಾಶ್ ಹೆಗ್ಡೆ ಅವರು ಹಿಂದೆ ಸಂಸದರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಬಲ ಪಡಿಸಬೇಕು ಎಂದು ಮನವಿ ಮಾಡಿದರು.
  ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ ಪರಿಣಾಮ ಬಿಜೆಪಿ ಗೆದ್ದೇ ಬಿಟ್ಟಿತು ಎಂಬಂತೆ ಬಿಂಬಿಸಲಾಯಿತು. ಆದರೆ ರಾಜ್ಯದ ಜನತೆ ಪ್ರಜ್ಞಾವಂತರಾಗಿದ್ದು, ಈ ಭಾರಿಯೂ ಕಾಂಗ್ರೆಸ್‌ಗೆ ಮತ ನೀಡುತ್ತಾರೆಂಬ ವಿಶ್ವಾಸವಿದೆ. ಹೀಗಾಗಿ ಜಯಪ್ರಕಾಶ್ ಹೆಗ್ಡೆ ಅತಿ ಹೆಚ್ಚು ಅಂತರದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
  ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿರುವ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿಗೆ ಏ. ೨೬ ರಂದು ನಡೆಯಲಿರುವ ಚುನಾವಣೆಯಲ್ಲಿ ರಾಜ್ಯ ಮಹಿಳೆಯರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದರು.
  ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ರಾಜ್ಯಸರ್ಕಾರದ ಜನಪರ ಯೋಜನೆಗಳನ್ನು ಸಹಿಸಿಕೊಳ್ಳದೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಡವರ ಸಂಕಷ್ಟ ಮನಗಂಡ ರಾಜ್ಯ ಸರ್ಕಾರ ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆಯಡಿ ೨ ಸಾವಿರ ರೂ. ನೀಡುತ್ತಿದೆ. ಶಕ್ತಿ, ಅನ್ನಭಾಗ್ಯ ಯೋಜನೆಯಡಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಮುಂದಾಗಿದೆ. ಇದನ್ನು ಸಹಿಸದ ಕುಮಾರಸ್ವಾಮಿ ಅವರು ತುಚ್ಛ ಹೇಳಿಕೆ ನೀಡುತ್ತಿದ್ದು, ಅವರನ್ನು ರಾಜ್ಯ ಹೆಣ್ಣು ಮಕ್ಕಳು ಸಹಿಸುವುದಿಲ್ಲ ಎಂದು ಹೇಳಿದರು.
  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಜಯಪ್ರಕಾಶ್ ಹೆಗ್ಡೆ ಗೆಲುವಿಗಾಗಿ ಪ್ರತಿ ಮನೆಗೂ ತೆರಳಿ ೫ ಗ್ಯಾರಂಟಿಗಳನ್ನು ಮನವರಿಕೆ ಮಾಡಲು ಕರಪತ್ರ ಹಂಚುತ್ತಿದ್ದೇವೆ. ಈ ನಿಟ್ಟಿನಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಿ ಜನರ ಬದುಕಿಗೆ ಆಶ್ರಯ ನೀಡುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ವಿನಂತಿಸಿದರು.
  ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರೇಖಾ ಹುಲಿಯಪ್ಪಗೌಡ, ಡಾ. ಡಿ.ಎಲ್ ವಿಜಯಕುಮಾರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ, ನಗರಸಭೆ ಸದಸ್ಯರಾದ ಲಕ್ಷ್ಮಣ, ಮಂಜುಳಾ ಲಕ್ಷ್ಮಣ, ಸಿ.ಪಿ ಲಕ್ಷ್ಮಣ, ಕಾವ್ಯಮತ್ತಿತರದಿದ್ದರು.

  See also  ಜಾನಪದ ಜಾತ್ರೆಗೆ ಮೀಸಲಿರಿಸಿರುವ ಅನುದಾನ ಜಿಲ್ಲಾ ಉತ್ಸವಕ್ಕೆ ಬಳಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts