ಪೊಟ್ಯಾಷ್ ಇಲ್ಲದೆ ರೈತರ ಪರದಾಟ

ಬಣಕಲ್: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಕಾಫಿ, ಅಡಕೆ, ಮೆಣಸಿನ ಬೆಳೆಗಳಿಗೆ ಗೊಬ್ಬರ ಹಾಕಲು ರೈತರು ಆರಂಭಿಸಿದ್ದು ಪೊಟ್ಯಾಷ್ ಗೊಬ್ಬರ ದೊರೆಯದೆ ಇರುವುದಿಂದ ರೈತರು ಪರದಾಡುವಂತಾಗಿದೆ.

ಸಾಮಾನ್ಯವಾಗಿ ಎಲ್ಲ ಸೊಸೈಟಿಗಳಲ್ಲೂ ವರ್ಷಪೂರ್ತಿ ಗೊಬ್ಬರ ದಾಸ್ತಾನಿರುತ್ತದೆ. ಪ್ರಸ್ತುತ ಪೊಟಾಶ್ ಗೊಬ್ಬರ 50 ಕೆಜಿ ಮೂಟೆಗೆ 700 ರೂ. ಇದ್ದು ಹೊಸದರ 900 ರೂ. ಆಗುವ ಸಂಭವವಿದೆ. ಮೂಟೆಗೆ 200 ರೂ. ಆಸೆಗಾಗಿ ಗೊಬ್ಬರ ಕಂಪನಿಗಳು ಪೊಟ್ಯಾಷ್ ಗೊಬ್ಬರ ಪೂರೈಸಲು ತಡಮಾಡುತ್ತಿವೆ ಎನ್ನುವುದು ರೈತರ ವಾದ.

ಪೊಟಾಶ್ ಗೊಬ್ಬರ ದರ ಮೂಟೆಗೆ 200 ರೂ. ಹೆಚ್ಚಾಗಿದ್ದು ಕಂಪನಿಗಳು ಗೊಬ್ಬರವನ್ನು ಸೊಸೈಟಿಗಳಿಗೆ ವಿತರಿಸಿದೆ ಮೀನಮೇಷ ಎಣಿಸುತ್ತಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪೊಟ್ಯಾಷ್ ಕಂಪನಿಯ ಅಧಿಕಾರಿಗಳನ್ನು ಸಂರ್ಪಸಿದರೆ ಭರವಸೆ ನೀಡುತ್ತಿದ್ದಾರೆ. ನಮ್ಮಲ್ಲಿ ಯೂರಿಯಾ, ರಾಕ್, ಡಿಎಪಿ ಎಲ್ಲ ಗೊಬ್ಬರಗಳಿದ್ದು ಪೊಟ್ಯಾಷ್ ಮಾತ್ರ ಲಭ್ಯವಿಲ್ಲದೆ ರೈತರಿಗೆ ಉತ್ತರ ನೀಡುವುದೇ ಕಷ್ಟವಾಗಿದೆ. ಗೊಬ್ಬರ ಬರುವುದು ತಡವಾದರೆ ರೈತರು ತೊಂದರೆ ಪಡುವಂತಾಗುತ್ತದೆ ಎನ್ನುತ್ತಾರೆ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ನಿಶಾಂತ್.

ಅಳಿದುಳಿದ ಬೆಳೆ ಉಳಿಸಿಕೊಳ್ಳೋಣವೆಂದರೆ ಸಕಾಲಕ್ಕೆ ಪೊಟ್ಯಾಷ್ ಗೊಬ್ಬರ ದೊರಕುತ್ತಿಲ್ಲ. ಈ ಬಾರಿ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಮಾಹಿತಿ ಪ್ರಕಾರ ಪೊಟ್ಯಾಷ್ ಬೆಲೆ ಹೆಚ್ಚಾಗಿದ್ದು ಹಣದಾಸೆಗಾಗಿ ಗೊಬ್ಬರವನ್ನು ತಮ್ಮಲ್ಲೆ ದಾಸ್ತಾನು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. 2 ದಿನದಿಂದ ಉತ್ತಮ ಮಳೆಯಾಗುತ್ತಿದ್ದು ಗೊಬ್ಬರ ಕಂಪನಿಗಳು ಶೀಘ್ರ ಪೂರೈಸದಿದ್ದರೆ ಪ್ರತಿಭಟನೆ ಮಾಡಲಾಗುವುದು.

| ಡಿ.ಆರ್.ದುಗ್ಗಪ್ಪ ಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ

 

ಪೊಟ್ಯಾಷ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಗೊಬ್ಬರ ಹಾಸನ ಹಾಗೂ ಮಂಗಳೂರಿನಿಂದ ಬರುತ್ತಿದ್ದು ಅಲ್ಲಿಂದ ಲಾರಿಗಳು ಬರುವುದು ತಡವಾಗಿರುವುದರಿಂದ ಸಮಸ್ಯೆ ಉದ್ಬವಿಸಿದೆ. ಇನ್ನೆರಡು ದಿನಗಳಲ್ಲಿ ಗೊಬ್ಬರ ಪೂರೈಸಲಾಗುವುದು.

| ಕರಿಬಸಪ್ಪ, ಇಂಡಿಯನ್ ಪೊಟ್ಯಾಷ್ ಲಿಮಿಟೆಡ್ ಮಾರಾಟ ಅಧಿಕಾರಿ

 

ಪೊಟ್ಯಾಷ್ ಗೊಬ್ಬರಕ್ಕೆ ಅಭಾವವಿಲ್ಲ

ಮೂಡಿಗೆರೆ: ತಾಲೂಕಿನಲ್ಲಿ ಪೊಟ್ಯಾಷ್ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ಕೃತಕ ಅಭಾವ ಸೃಷ್ಟಿ ಮಾಡುವ ತಂತ್ರ ನಡೆಯುತ್ತಿದೆಯೇ ಹೊರತು ಅಭಾವವಿಲ್ಲ. ಹಾಗಾಗಿ ರೈತರು ಹೆದರಬೇಕಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಮುದಾ ಹೇಳಿದರು. ಪೊಟ್ಯಾಷ್ ಗೊಬ್ಬರದ ಬೇಡಿಕೆ ಹೆಚ್ಚಾಗಿ ಇರುವೆಡೆ ಸೊಸೈಟಿಯಲ್ಲಿ ಸಿಗದಿದ್ದರೆ ರೈತರು ಕೂಡಲೆ ಇಲಾಖೆಗೆ ಮಾಹಿತಿ ನೀಡಿದರೆ ಪೂರೈಸುತ್ತೇವೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು. ಬಣಕಲ್ ಟಿಎಪಿಸಿಎಂಎಸ್ ಮತ್ತು ಬಿ.ಹೊಸಳ್ಳಿಗೆ 3 ಲೋಡ್ ಪೊಟ್ಯಾಷ್ ಗೊಬ್ಬರ ಬರಲಿದೆ. ಗೊಬ್ಬರ ಸಮಸ್ಯೆ ಇದ್ದರೆ ಕೂಡಲೆ ತಿಳಿಸಬೇಕೆಂದು ತಾಲೂಕಿನ ಎಲ್ಲ ಸಂಘದ ಸಿಇಒಗಳಿಗೆ ಸೂಚಿಸಲಾಗಿದೆ. ಬೇಡಿಕೆ ಬಗ್ಗೆ ಸೊಸೈಟಿಯಿಂದ ಮಾಹಿತಿ ಪಡೆದು ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ನೆರಡು ದಿನದಲ್ಲಿ ಗೊಬ್ಬರ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು. ಗೊಬ್ಬರ ಸಿಗುತ್ತಿದ್ದರೂ ಕೆಲವರು ಸಮಯ, ಸಂದರ್ಭ ಬಳಸಿಕೊಂಡು ಹೆಚ್ಚುವರಿ ಹಣ ಗಳಿಸಲು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ರೈತರು ಕಿವಿಗೊಡಬಾರದು. ತಾಲೂಕಿನಲ್ಲಿ ಗೊಬ್ಬರದ ಸಮಸ್ಯೆಯೆ ಇಲ್ಲ. ಹಾಗೇನಾದರೂ ಸಮಸ್ಯೆ ಕಂಡುಬಂದರೆ ರೈತರು ನೇರವಾಗಿ ಕೃಷಿ ಇಲಾಖೆಗೆ ಭೇಟಿ ನೀಡಿ ಅಥವಾ ದೂರವಾಣಿ ಮೂಲಕ ಮಾಹಿತಿ ನೀಡಿ ಎಂದು ತಿಳಿಸಿದರು.