ಶಿವಣ್ಣನಿಗೆ ಮುಂಬಾ ಸ್ಟಾರ್ ಪುರಸ್ಕಾರ

ಬೆಂಗಳೂರು: ನಟ ಶಿವರಾಜ್​ಕುಮಾರ್​ಗೆ ಈಗಾಗಲೇ ‘ಹ್ಯಾಟ್ರಿಕ್ ಹೀರೋ’, ‘ಸೆಂಚುರಿ ಸ್ಟಾರ್’, ‘ಕರುನಾಡ ಚಕ್ರವರ್ತಿ’ ಹೀಗೆ ಹಲವು ಬಿರುದುಗಳನ್ನು ಅಭಿಮಾನಿಗಳು ನೀಡಿದ್ದಾರೆ. ಹಲವು ಪ್ರಶಸ್ತಿಗಳೂ ಅವರ ಮುಡಿಗೇರಿವೆ. ಈಗ ಅವರಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್​ನಲ್ಲಿ ‘ಮುಂಬಾ ಸ್ಟಾರ್’ ಅವಾರ್ಡ್ ನೀಡಲಾಗಿದೆ. ಇತ್ತೀಚೆಗೆ ಮೆಲ್ಬರ್ನ್​ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಆ ನಿಮಿತ್ತ ಮೆಲ್ಬರ್ನ್ ಕನ್ನಡ ಸಂಘ, ‘ಮುಂಬಾ ಸ್ಟಾರ್’ ಎಂಬ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

ಆಸ್ಟ್ರೇಲಿಯಾದ ಮೆಲ್ಬರ್ನ್​ನಲ್ಲಿ ನೆಲೆಸಿರುವಂತಹ ಕನ್ನಡಿಗರು, ಕಳೆದ 32 ವರ್ಷಗಳಿಂದ ಕನ್ನಡ ಸಂಘ ಕಟ್ಟಿಕೊಂಡು ಕಾಂಗರೂ ನಾಡಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಿದ್ದಾರೆ. ಸಂಘದ ವತಿಯಿಂದ ಶಾಲೆಯನ್ನೂ ತೆರೆದಿದ್ದು, ಅದರಲ್ಲಿ 75ಕ್ಕೂ ಹೆಚ್ಚು ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಇತ್ತೀಚೆಗೆ ಇದೇ ಸಂಘದಿಂದ ಕನ್ನಡ ಭವನ ನಿರ್ವಣಕ್ಕೆ ಚಾಲನೆ ದೊರೆತಿದೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಈ ಭವನ ನಿರ್ವಣಕ್ಕೆ ಚಾಲನೆ ನೀಡಿದ್ದು, ಕನ್ನಡದ ಡಿಂಡಿಮ ಬಾರಿಸಿದ್ದಾರೆ. ಅಷ್ಟೇ ಅಲ್ಲ, ಅದ್ದೂರಿ ಕಾರ್ಯಕ್ರಮದಲ್ಲಿ ‘ಟಗರು ಬಂತು ಟಗರು…’ ಸೇರಿ ಹಲವು ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲಿನ ಮಕ್ಕಳು, ಮಹಿಳೆಯರಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿವೆ. ಮೆಲ್ಬರ್ನ್ ಕನ್ನಡ ಸಂಘದ ಸಾಕಷ್ಟು ವಿಭಾಗಗಳಲ್ಲಿ ಕೆಲಸ ಮಾಡಿರುವ ಶ್ರೀಚಂದ್ರ ಅವರು ಈಗ ಸಂಘದ ಅಧ್ಯಕ್ಷರಾಗಿದ್ದಾರೆ. ಅವರ ಕಾರ್ಯಕ್ಕೆ ಬೆಂಗಳೂರಿನ ಉದ್ಯಮಿ ಸಾಯಿ ಅಶೋಕ್ ಸಾಥ್ ನೀಡುತ್ತಿದ್ದಾರೆ.