ಹಠಮಾರಿ ಸಂಯುಕ್ತಾ

ಬೆಂಗಳೂರು: 2014ರಲ್ಲಿ ತೆರೆಗೆ ಬಂದಿದ್ದ ‘ಉನ್ ಸಮಯಾಲ್ ಅರಯಿಲ್’ ಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ತಮಿಳು ಸಿನಿಮಾ ಇಂಡಸ್ಟ್ರಿಗೂ ಪದಾರ್ಪಣೆ ಮಾಡಿದ್ದರು. ಈಗ ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ‘ರೆಡ್ರಂ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಅವರು ಪರಿಚಿತಗೊಳ್ಳುತ್ತಿದ್ದಾರೆ.

ರೊಮ್ಯಾಂಟಿಕ್, ಸೈಕೋ ಥ್ರಿಲ್ಲರ್ ಶೈಲಿಯ ಸಿನಿಮಾದಲ್ಲಿ ಸಂಯುಕ್ತಾ ಗಿಟಾರಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ, ಗಿಟಾರ್ ಕಲಿಕೆ ಮುಗಿಸಿಕೊಂಡು ಬಂದಿದ್ದಾರೆ. ವಿಕ್ರಮ್ ಶ್ರೀಧರನ್ ಚೊಚ್ಚಲ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ ‘ರೆಡ್ರಂ’ ಚಿತ್ರದಲ್ಲಿ ಅಶೋಕ್ ಸೆಲ್ವನ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಸಂಯುಕ್ತಾ ಜೋಡಿಯಾಗಿದ್ದಾರೆ. ಇಲ್ಲಿ ಅವರ ಪಾತ್ರ ತುಂಬ ವಿಶೇಷವಾಗಿದೆಯಂತೆ. ಚಂದ್ರಿಕಾ ಎಂಬ ಹುಡುಗಿಯ ಪಾತ್ರ ನಿಭಾಯಿಸುತ್ತಿದ್ದು, ಗಿಟಾರಿಸ್ಟ್ ಆಗಿದ್ದಾರೆ. ‘ತುಂಬ ಬೋಲ್ಡ್ ಮನಸ್ಥಿತಿ ಮತ್ತು ಯಾರಿಗೂ ಹೆದರದ ವ್ಯಕ್ತಿತ್ವ ಅವಳದ್ದು. ಜಗಳಗಂಟಿ, ಅವಳ ಮನಸಿಗೆ ಏನು ತಿಳಿಯುತ್ತೋ ಅದನ್ನೇ ಮಾಡುವ ಹಠಮಾರಿ. ಅಂಥ ಹುಡುಗಿಗೆ ಗಿಟಾರ್ ಅಂದರೆ ತುಂಬ ಇಷ್ಟ. ಅದಕ್ಕಾಗಿ ನಾನು ಕೆಲ ದಿನಗಳ ಕಾಲ ಗಿಟಾರ್ ಕಲಿತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಸಂಯುಕ್ತಾ.

ಅಂದಹಾಗೆ, ಈ ‘ರೆಡ್ರಂ’ ಅಂದರೇನು? (ಛಿಛ್ಟ್ಠ) ಈ ಪದವನ್ನು ಉಲ್ಟಾ ಮಾಡಿ ಓದಿದಾಗ ಮರ್ಡರ್ ಎಂಬುದು ಗೋಚರವಾಗುತ್ತದೆ. ಶೀರ್ಷಿಕೆಯಲ್ಲಿಯೇ ಇಂಥದ್ದೊಂದು ಟ್ವಿಸ್ಟ್ ಇಟ್ಟುಕೊಂಡಿದ್ದು, ಸಿನಿಮಾದಲ್ಲೂ ಅಷ್ಟೇ ಪ್ರಮಾಣದ ಕುತೂಹಲ ಇರಲಿದೆಯಂತೆ. ಈಗಾಗಲೇ ಚೆನ್ನೈನಲ್ಲಿ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡಿರುವ ‘ರೆಡ್ರಂ’ ಚಿತ್ರತಂಡ ಇಂದು (ನ.12) ಎರಡನೇ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಿದೆ. ಜತೆಗೆ 28ರಿಂದ ಊಟಿಯಲ್ಲಿಯೂ ಕೆಲವು ದೃಶ್ಯಗಳನ್ನು ಸೆರೆಹಿಡಿಯುವ ಪ್ಲಾ್ಯನ್ ಇದೆ. ಎಲ್ಲ ಅಂದುಕೊಂಡಂತೆ ನಡೆದರೆ, 2019ರ ಸಂಕ್ರಾಂತಿ ವೇಳೆ ಸಿನಿಮಾ ಬಿಡುಗಡೆಯಾಗಲಿದೆಯಂತೆ.

ಸಸ್ಪೆನ್ಸ್ ಶೈಲಿಯ ಚಿತ್ರದಲ್ಲಿ ಭಾವನೆಗಳಿಗೂ ನಿರ್ದೇಶಕರು ಸ್ಥಳಾವಕಾಶ ನೀಡಿದ್ದಾರೆ. ತಂದೆಯ ಮಾತನ್ನು ಧಿಕ್ಕರಿಸಿ, ಪ್ರಿಯಕರನೇ ಎಲ್ಲ ಅಂದುಕೊಂಡಾಕೆಯ ಜೀವನದಲ್ಲಿ ಏನೆಲ್ಲ ಘಟಿಸುತ್ತದೆ ಎಂಬುದನ್ನು ಹೇಳಿದ್ದೇವೆ. ಸಂಬಂಧಗಳ ಮಹತ್ವವನ್ನೂ ತೋರಿಸಿದ್ದೇವೆ.

| ಸಂಯುಕ್ತಾ ಹೊರನಾಡು ನಟಿ