ದುರ್ಗಮ ಹಾದಿಯಲ್ಲಿ ದುರ್ಗೆಯರು

ಸಮಾಜ ಇಂದು ಪಿತೃಪ್ರಧಾನ ಮೌಲ್ಯಗಳನ್ನು ಸಂಪೂರ್ಣವಾಗಿ ಮರೆತು ಸ್ತ್ರೀ-ಪುರುಷ ಸಮಾನತೆಯ ನೆಲೆಗಟ್ಟಿನ ಮೇಲೆ ದೃಢವಾಗಿ ನಿಂತಿದೆಯೆ? ಆಕೆಯ ಎಲ್ಲ ಕಷ್ಟಗಳಿಗೂ ಪರಿಹಾರ ಸಿಕ್ಕಿದೆಯೆ? ಇದು ಬಹಳ ಜಟಿಲವಾದ ಪ್ರಶ್ನೆ. ಯಾಕೆಂದರೆ ಬಾಹ್ಯನೋಟಕ್ಕೆ ಮಹಿಳೆಯ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ ಕಾಣುತ್ತಿದೆ. ಆದರೆ ಸಮಾನತೆ, ಸಬಲೀಕರಣದ ಹಾದಿಯಲ್ಲಿ ಮಹಿಳೆ ಇನ್ನೂ ಕಠಿಣವಾದ ಪರೀಕ್ಷೆಗಳನ್ನು ಎದುರಿಸುತ್ತಿದ್ದಾಳೆ…

| ಡಾ. ಪಾರ್ವತಿ ಜಿ.ಐತಾಳ್​

ಮಹಿಳೆಯ ಸ್ಥಿತಿಗತಿ, ಸ್ಥಾನಮಾನಗಳಲ್ಲಿ ಇಂದು ಸಾಕಷ್ಟು ಬದಲಾವಣೆಯಾಗಿದೆ. ಅಭಿವೃದ್ಧಿಯೂ ಆಗಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳಿಗಾಗಿ ಸತತ ಹೋರಾಟ ನಡೆಸಿ ಆಕೆ ಅವೆಲ್ಲವನ್ನೂ ಈಗಾಗಲೇ ಪಡೆದುಕೊಂಡಿದ್ದಾಳೆ. ಅನೇಕರ ದೃಷ್ಟಿಯಲ್ಲಿ ಆಕೆಯ ಸಮಾನತೆಯ ಕನಸು ನನಸಾಗಿದೆ. ಆಕೆ ಇಂದು ಹಿಂದಿನಂತೆ ದಮನಿತಳಲ್ಲ. ಆದ್ದರಿಂದಲೇ ಆಕೆ ‘ಇನ್ನೂ ತನ್ನ ಮೇಲೆ ಶೋಷಣೆ ನಡೆಯುತ್ತಿದೆ, ತನಗೆ ಅನ್ಯಾಯವಾಗುತ್ತಿದೆ’ ಎಂದು ಧ್ವನಿಯೆತ್ತುವುದು- ಕೂಗಾಡುವುದು ಹಲವರಿಗೆ ಅರ್ಥಹೀನವಾಗಿ ಕಾಣುತ್ತಿದೆ. ಹಾಗಾದರೆ ಎಲ್ಲವೂ ಸರಿಯಾಗಿದೆಯೆ? ವರದಕ್ಷಿಣೆ, ಪತ್ನಿಪೀಡನೆ, ಲೈಂಗಿಕ ಕಿರುಕುಳ, ಮಹಿಳಾ ದೌರ್ಜನ್ಯ ಮೊದಲಾದ ಸಮಸ್ಯೆಗಳ ವಿರುದ್ಧ ಇಂದು ಕಾನೂನುಗಳೇ ಇವೆ. ಇತ್ತೀಚೆಗೆ ಮುಸ್ಲಿಂ ಮಹಿಳೆಯರ ಬಹು ದೊಡ್ಡ ಸಮಸ್ಯೆಯಾದ ತ್ರಿವಳಿ ತಲಾಖ್​ನ ವಿರುದ್ಧವೂ ಕಾನೂನು ಜಾರಿಯಾಗಿದೆ. ಆದರೆ, ಪುರುಷರ ಮಾನಸಿಕ ಪರಿವರ್ತನೆಯಲ್ಲದೆ ಇಂಥ ಕಾನೂನುಗಳ ಮೂಲಕ ಮಹಿಳೆಗಾಗುವ ಅನ್ಯಾಯವನ್ನು ತಡೆಗಟ್ಟಲು ಸಾಧ್ಯವಿಲ್ಲ ಅನ್ನುವುದು ಅನೇಕರ ಅನುಭವಕ್ಕೆ ಬಂದ ವಿಚಾರ. ದಿನಬೆಳಗಾದರೆ ಕೇಳುವ ಲೈಂಗಿಕ ಅತ್ಯಾಚಾರಗಳು ಮತ್ತು ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವ ಮೋಸದ ಜಾಲಗಳು ಭಯ ಹುಟ್ಟಿಸುತ್ತಿವೆ. ಪ್ರೀತಿಗೆ ಪ್ರತಿಕ್ರಿಯಿಸಿಲ್ಲ ಎನ್ನುವ ಕಾರಣಕ್ಕೆ ಆಸಿಡ್ ಎರಚುವ, ಕೊಲೆ ಮಾಡುವ ಮೊದಲಾದ ಪ್ರಕರಣಗಳೂ ಆಘಾತಕಾರಿಯಾಗಿವೆ. ಆದರೆ ಹೊರಗಣ್ಣಿಗೆ ಕಾಣುವ ಇಂಥ ಕ್ರೌರ್ಯಗಳ ಬಗ್ಗೆ ಪ್ರತಿಯೊಬ್ಬರೂ ಸಹಾನುಭೂತಿಯಾದರೂ ತೋರಿಸುತ್ತಾರೆ. ಪುರುಷರ ವಿಕೃತ ಕಾಮದ ಬಗ್ಗೆ ಛೀಮಾರಿ ಹಾಕುತ್ತಾರೆ ಕೂಡ. ಆದರೆ ಅಸಮಾನತೆಯ ನೆಲೆಯಲ್ಲಿ, ಇನ್ನೂ ಹಾಗೆಯೇ ಉಳಿದಿರುವ ನೂರಾರು ಸಮಸ್ಯೆಗಳು ಬೂದಿ ಮುಚ್ಚಿದ ಕೆಂಡದಂತೆ ಮಹಿಳೆಯ ಬದುಕನ್ನು ನರಕವಾಗಿಸುತ್ತಿರುವುದು ಅನೇಕರ ಗಮನಕ್ಕೆ ಇನ್ನೂ ಬಂದಿಲ್ಲವೆನ್ನುವುದು ಕಹಿ ಸತ್ಯ.

ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಬಯಸಿದಾಗ ಎಷ್ಟಾದರೂ ಮುಂದೆ ಅಡುಗೆ ಕೆಲಸ ತಾನೇ ಕಟ್ಟಿಟ್ಟ ಬುತ್ತಿ ಅನ್ನುತ್ತಾರೆ. ‘ಹೆಚ್ಚು ಓದಿದರೆ ಗಂಡ ಸಿಗುವುದಿಲ್ಲ’ ಅನ್ನುತ್ತಾರೆ (ಮದುವೆಯಾಗಿ ಕುಟುಂಬ ನೋಡಿಕೊಳ್ಳುವುದೇ ಅವಳ ಜೀವನದ ಪರಮ ಧ್ಯೇಯವೋ ಎನ್ನುವ ಹಾಗೆ! ಗಂಡು ಮಗ ಎಷ್ಟು ಓದಿ ಉನ್ನತ ಸ್ಥಾನ ಪಡೆದರೂ ಅದು ಸ್ವಾಗತಾರ್ಹ!) ಹೆಚ್ಚು ಓದಿದ ಅಥವಾ ಹೆಚ್ಚು ಸಂಬಳ ಪಡೆಯುವ ಹೆಂಡತಿಯನ್ನು ಸಮಾಜ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಗಂಡನಾದವನು ಹೆಂಡತಿಗಿಂತ ಯಾವಾಗಲೂ ಮೇಲೆ ಇರಬೇಕೆನ್ನುವುದು ಪುರುಷ ಪ್ರಧಾನ ಸಮಾಜ ಬೆಳೆಸಿಕೊಂಡು ಬಂದ ನಂಬಿಕೆ. ಮದುವೆಯಾದ ನಂತರ ಗಂಡ-ಹೆಂಡತಿಯರ ನಡುವೆ ಒಳ್ಳೆಯ ಹೊಂದಾಣಿಕೆಯಿದ್ದರೂ ಸಮಾಜ ಅನವಶ್ಯವಾಗಿ ಇಂಥ ವಿಷಯಗಳಲ್ಲಿ ತಲೆ ಹಾಕುವುದನ್ನು ನಿಲ್ಲಿಸಿಲ್ಲ. ಕುಟುಂಬದೊಳಗೆ ಸಮಾನತೆ ಸಾಧಿಸುವ ಮನಸ್ಸು ಒಬ್ಬ ಒಳ್ಳೆಯ ಪುರುಷನಿಗೆ ಇದ್ದರೂ ಸಾಂಪ್ರದಾಯಿಕ ಸಮಾಜ ಅಡ್ಡ ಬರುವುದಿದೆ. ಗಂಡ ಅಡುಗೆ ಮಾಡಿ ಹೆಂಡತಿಗೆ ಬಡಿಸಿದರೆ ಅಥವಾ ಹೆಂಡತಿ-ಮಕ್ಕಳ ಬಟ್ಟೆ ಒಗೆದರೆ ಅವನನ್ನು ಅಮ್ಮಾವ್ರ ಗಂಡನೆಂದು ಕರೆದು ಗೇಲಿ ಮಾಡಿ ನೋಯಿಸುತ್ತಾರೆ. ಉದ್ಯೋಗದಲ್ಲಿರುವ ಹೆಂಡತಿ ಎಷ್ಟೋ ಕುಟುಂಬಗಳಲ್ಲಿ ಇಂದು ಕೂಡ ಮನೆಯೊಳಗೂ ಹೊರಗೂ ಸೋತು ಸುಣ್ಣವಾದರೂ ಯಾರೂ ಆ ಬಗ್ಗೆ ಗಮನ ಹರಿಸುವುದಿಲ್ಲ. ಅದು ಅತ್ಯಂತ ಸಹಜವೇನೋ ಎಂಬಂತೆ ನಡೆದುಕೊಳ್ಳುತ್ತಾರೆ. ಹೆಂಡತಿ ತನ್ನ ಉದ್ಯೋಗ ಸ್ಥಳದಿಂದ ನೇರವಾಗಿ ಮನೆಗೆ ಬರಬೇಕು. ಗಂಡ ಮನೆಯ ಗೊಡವೆಯಿಲ್ಲದೆ ಊರೆಲ್ಲ ಸುತ್ತಿ, ಕೆಲವೊಮ್ಮೆ ಕಂಠಪೂರ್ತಿ ಕುಡಿದು ಬಂದು ಸಾಯಹೊಡೆದರೂ ಅದನ್ನು ಹೇಂಡತಿ ಸಹಿಸಿಕೊಳ್ಳಬೇಕು.ಅದು ‘ಗಂಡಹೆಂಡಿರ ಜಗಳ’ವೆಂದು ಹೇಳಿ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

ಎಷ್ಟೊ ಕುಟುಂಬಗಳಲ್ಲಿ ಗಂಡ ಸಂಪಾದಿಸುವ ಹಣವೆಲ್ಲ ಅವನ ವೈಯಕ್ತಿಕ ಖರ್ಚಿಗೆ. ಮನೆಗೆ ಬೇಕಾದ ಎಲ್ಲ ವಸ್ತುಗಳನ್ನೂ ಹೆಂಡತಿಯೇ ಕೊಂಡು ತರಬೇಕು. ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುವ, ಅವರನ್ನು ಶಾಲೆಗೆ ಹೊರಡಿಸುವ ಮತ್ತು ಕಳುಹಿಸುವ ಜವಾಬ್ದಾರಿ ಹೆಂಡತಿಯದ್ದು ಮಾತ್ರ.

ಕಣ್ತೆರೆಸುವ ಅನಲ: ಇತ್ತೀಚೆಗೆ ಸಂಜ್ಯೋತಿ ಎಂಬುವರ ನಿರ್ದೇಶನದಲ್ಲಿ ಬಂದ ‘ಅನಲ’ ಎಂಬ ರಾಜ್ಯ ಪ್ರಶಸ್ತಿ ವಿಜೇತ ಕಿರುಚಿತ್ರದಲ್ಲಿ ಉದ್ಯೋಗಸ್ಥ ಹೆಂಡತಿಯೊಬ್ಬಳಿಗೆ ಈ ಜಂಜಾಟವೆಲ್ಲ ಸಾಕಾಗಿ ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದ ಹಾಗೆ ಒಂದು ಹೊಸ ಆಲೋಚನೆ ಬರುತ್ತದೆ. ‘ಇವತ್ತು ನಾನು ಗಂಡನಾಗಿ, ಅವರು ಹೆಂಡತಿಯಾಗಲಿ’ ಎಂದು. ಬೆಳಗ್ಗೆ ಬೇಗ ಏಳುವುದಿಲ್ಲ. ಗಂಡನ ಹತ್ತಿರ ಚಹ ಮಾಡಿ ಕೊಡಲು ಹೇಳುತ್ತಾಳೆ. ಆಕೆಗೇನೋ ಹುಷಾರಿಲ್ಲವೆಂದು ಗಂಡ ಚಹ ಮಾಡಿ ಕೊಡುತ್ತಾನೆ. ಆಕೆ ಎದ್ದು ಆರಾಮವಾಗಿ ಮುಖ ತೊಳೆದು ಬಂದು ಪೇಪರ್ ಓದುತ್ತ ಕಾಲ ಮೇಲೆ ಕಾಲು ಹಾಕಿ ಕುಳಿತು ಚಹ ಹೀರುತ್ತಾಳೆ. ನಂತರ ಮೈಮುರಿಯುತ್ತ ನಿಧಾನವಾಗಿ ಎದ್ದು ನಿಂತು ಯಾವುದೋ ಹಾಡನ್ನು ಗುನುಗುತ್ತ ಸ್ನಾನಕ್ಕೆ ಹೋಗುತ್ತಾಳೆ. ಅಡುಗೆ ಮನೆಗೆ ಹೋಗುವುದಿಲ್ಲ. ಗಂಡನಿಗೆ ಸಂದೇಹವಾಗುತ್ತದೆ ‘ಆಕೆಗೆೆ ಮಾನಸಿಕ ಅಸ್ವಸ್ಥತೆ ಇರಬಹುದೇನೋ?’ ಎಂದು. ತಕ್ಷಣ ಮನೋವೈದ್ಯರಿಗೆ ಫೋನ್ ಮಾಡುತ್ತಾನೆ. ಮನೆಯೊಳಗಿನ ಕೆಲಸಗಳನ್ನು ಹೆಣ್ಣೇ ಮಾಡಬೇಕು ಎನ್ನುವುದು ತೀರಾ ಅವೈಜ್ಞಾನಿಕವಾದರೂ ಸಾಂಪ್ರದಾಯಿಕ ನಂಬಿಕೆಗಳಿಂದ ಬಿಡುಗಡೆಗೊಳ್ಳದ ಮನಸ್ಸುಗಳಿಂದಾಗಿ ಆಕೆಗೆ ಮನೆಯೊಳಗಿನ ಕೆಲಸಗಳಿಂದ ಬಿಡುಗಡೆ ಸಾಧ್ಯವೇ ಇಲ್ಲ ಎಂಬ ಧ್ವನಿ ಕಥೆಯಲ್ಲಿದೆ. ಇಂದಿನ ಯುವ ತಲೆಮಾರಿನ ಬೆರಳೆಣಿಕೆಯ ಮಂದಿಯಾದರೂ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿರುವುದು ಒಂದು ಸಮಾಧಾನದ ಸಂಗತಿ.

ಆಧುನಿಕತೆಯ ಅಮಲಿನಲ್ಲಿ ಯುವ ತಲೆಮಾರಿನ ಹೆಣ್ಣು ಮಕ್ಕಳು ತಮಗೆ ದೊರಕಿದ ಸ್ವಾತಂತ್ರ್ಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಇತ್ತೀಚೆಗೆ ಹುಟ್ಟಿಕೊಂಡಿರುವ ಇನ್ನೊಂದು ಸಮಸ್ಯೆ. ಸ್ವಾತಂತ್ರ್ಯು ಆರೋಗ್ಯಕ್ಕೂ ವ್ಯಕ್ತಿತ್ವಕ್ಕೂ ಮಾರಕವಾಗಬಾರದಲ್ಲ? ಮಾದಕ ವ್ಯಸನ, ಮದ್ಯಪಾನ ಮತ್ತು ಧೂಮಪಾನಗಳ ಚಟಗಳಿಗೆ ಅಂಟಿಕೊಳ್ಳುವ ಹೆಣ್ಣುಮಕ್ಕಳ ಬಗ್ಗೆ ನಾನಿಲ್ಲಿ ಹೇಳುತ್ತಿದ್ದೇನೆ. ಗಂಡು ಮಕ್ಕಳು ಮಾಡುತ್ತಿದ್ದಾರಲ್ಲ, ನಾವೇಕೆ ಹಾಗೆ ಮಾಡಬಾರದು? ಎಂಬುದು ಅವರ ಪ್ರಶ್ನೆ. ಆದರೆ, ‘ಹೆಣ್ಣುಮಕ್ಕಳು ಕುಡಿಯುವುದರಿಂದ ಕೌಟುಂಬಿಕ ಬದುಕು ಹಾಳಾಗುತ್ತದೆ, ಮಕ್ಕಳ ಮೇಲೆ ದುಷ್ಪರಿಣಾಮವಾಗುತ್ತದೆ, ಸಂಸ್ಕೃತಿ ನಾಶವಾಗುತ್ತದೆ’ ಎನ್ನುತ್ತ ಇವೆಲ್ಲವನ್ನೂ ಕಾಪಾಡುವ ಹೊಣೆಯನ್ನು ನಯವಾಗಿ ಮಹಿಳೆಯರ ಮೇಲೆ ಹಾಕುವ ಹುನ್ನಾರವಿದೆಯಲ್ಲ, ಅದನ್ನು ವಿರೋಧಿಸಬೇಕಾಗುತ್ತದೆ. ಗಂಡಸರು ಮದ್ಯಪಾನ ಮಾಡುತ್ತಾರಾದರೆ ಅವರಿಗೆ ಯಾವುದರಲ್ಲೂ ಕಡಿಮೆಯಿಲ್ಲದ ನಾವೇಕೆ ಮಾಡಬಾರದು ಎಂದು ವಾದಿಸಿ ಹೆಣ್ಣುಮಕ್ಕಳು ಕುಡಿಯುತ್ತಾರಲ್ಲ, ಅದು ಮಾತ್ರ ಮೂರ್ಖತನ. ನಾವು ಸಮಾನತೆ ಸಾಧಿಸಬೇಕಾದ್ದು ಬಾಹ್ಯ ವಿಚಾರಗಳಲ್ಲಲ್ಲ. ಬೌದ್ಧಿಕ ಸಮಾನತೆ, ಸಮಾಜದಲ್ಲಿ ಸಿಗುವ ಸ್ಥಾನಮಾನಗಳಲ್ಲಿ ಸಮಾನತೆ, ಹಕ್ಕುಗಳು, ಅವಕಾಶಗಳು ಮೊದಲಾದ ವಿಚಾರಗಳಲ್ಲಿ ಸಮಾನತೆ ಸಾಧಿಸುವುದು ಮುಖ್ಯ. ಇವತ್ತು ಸಾರ್ವಜನಿಕ ವೇದಿಕೆಗಳಲ್ಲಿ ನೋಡಿ. ಹತ್ತು ಮಂದಿ ಪುರುಷರಿದ್ದರೆ ಒಬ್ಬ ಮಹಿಳೆ ಇರುತ್ತಾಳೆ. ಕೆಲವೊಮ್ಮೆಯಂತೂ ವೇದಿಕೆಯ ತುಂಬ ಪುರುಷರೇ ವಿಜೃಂಭಿಸುತ್ತಾರೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದಕ್ಕೆ ಒಳ್ಳೆಯ ಉದಾಹರಣೆ. ಮನೆಯೊಳಗಿನ ಕೆಲಸಗಳು, ಕೌಟುಂಬಿಕ ಜವಾಬ್ದಾರಿಗಳಲ್ಲಿ ಸದಾ ತೊಳಲಾಡುವ ಮಹಿಳೆಯರಿಗೆ ಇದು ಬೇಕಾಗಿಯೂ ಇಲ್ಲ. ಅವರಲ್ಲಿ ಪ್ರತಿಭೆಯಿದ್ದರೂ ಅದು ಪ್ರೋತ್ಸಾಹ ಮತ್ತು ಅವಕಾಶ ಸಿಗದೆ ಕಮರಿ ಹೋಗುವುದೇ ಹೆಚ್ಚು. ಇದರ ಉಪಯೋಗ ಪಡೆದು ತೀರಾ ಸಾಮಾನ್ಯ ಪ್ರತಿಭೆಯುಳ್ಳ ಪುರುಷರು ಕೂಡ ಎಲ್ಲ ಅವಕಾಶಗಳನ್ನೂ ತಾವೇ ಕಬಳಿಸಿಕೊಂಡು ಮೆರೆಯುತ್ತಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಅವಕಾಶಗಳು ಮಹಿಳೆಯರಿಗೆ ಸಿಗುತ್ತವೆ. ಹೀಗೆ ಇಂದಿನ ಮಹಿಳಾ ಬದುಕು ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಾಗಿ ಬಿಟ್ಟಿದೆ. ಅದು ಪೂರ್ತಿಯಾಗಿ ಆರಕ್ಕೇರಿ ದೃಢವಾಗಿ ನಿಲ್ಲುವ ಕಾಲ ಎಂದು ಬರುವುದೋ ಎಂದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *