ಕರಾಟೆ ಚಾಂಪಿಯನ್ ಪ್ರಕೃತಿ

| ಶ್ರೀಪತಿ ಹೆಗಡೆ ಹಕ್ಲಾಡಿ

ಕುಂದಾಪುರ: ಈ ಪೋರಿಗಿನ್ನೂ ಹನ್ನೊಂದು ವರ್ಷ ದಾಟಿಲ್ಲ.. ಗೆದ್ದ ಪ್ರಶಸ್ತಿಗಳೇ ನೂರಾರು. ಭಾಗವಹಿಸಿದ ಸ್ಪರ್ಧೆಯಲ್ಲೆಲ್ಲ ಚಿನ್ನ ಬಾಚಿ ತಂದಿದ್ದಾಳೆ. ಪ್ರತಿಭೆ ಯಾರ ಸೊತ್ತೂ ಅಲ್ಲ. ಸಾಧನೆ ಮೂಲಕ ಎಲ್ಲವೂ ನಮ್ಮ ಎಣಿಕೆಯಂತೆ ನಡೆಯುತ್ತದೆ ಎನ್ನುವುದಕ್ಕೆ ಈ ಪುಟಾಣಿಯೇ ಸಾಕ್ಷಿ.

ಉಡುಪಿ ಜಿಲ್ಲೆ ಕುಂದಾಪುರದ ಎಚ್​ಎಂಎಂ ಇಂಗ್ಲಿಷ್ ಮೀಡಿಯಂ ಇಪಿಎಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಕೃತಿ. ಈಕೆಯ ತಂದೆ ಪ್ರಕಾಶ್ ಜಿ.ಆರ್. ಹೋಟೆಲ್ ಉದ್ಯೋಗಿ. ತಾಯಿ ಮಾಣಿ ಪ್ರಮೀಳಾ ಕುಂದಾಪುರ ಕೆಎಎಸ್​ಜಿಐ ಬೆಡ್ ಸೆಂಟರ್​ನ ಉದ್ಯೋಗಿ. ಕರಾಟೆ ಗುರು ಕಿರಣ್ ಡ್ರಾಗನ್ ಈ ಪುಟಾಣಿಯಲ್ಲಿರುವ ಕರಾಟೆ ಆಸಕ್ತಿ ಗುರುತಿಸಿ, ಪೋಷಿಸಿದರು. ಈಕೆಯ ಪ್ರತಿಭೆ ಕರಾಟೆಗೆ ಸೀಮಿತವಾಗಿಲ್ಲ. ಯಕ್ಷಗಾನ, ಛದ್ಮವೇಷವನ್ನೂ ಹವ್ಯಾಸವಾಗಿ ಬೆಳೆಸಿಕೊಂಡಿದ್ದಾಳೆ. ಓದಿನಲ್ಲೂ ಈಕೆ ಚುರುಕು. 2012ರಲ್ಲಿ ಕುಂದಾಪುರ ಅನಂತ ಪದ್ಮನಾಭ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಪ್ರಕೃತಿ ಪದಕಗಳ ಬೇಟೆ ಶುರುವಿಟ್ಟಳು. 2013ರಲ್ಲಿ ನಡೆದ ಕರಾಟೆ ಇಂಟ್ರದೋಜದಲ್ಲಿ ಚಿನ್ನ, ಕಂಚು, 2014ರ ಇಂಟ್ರದೋಜದಲ್ಲಿ ಚಿನ್ನ ಹಾಗೂ ಕಂಚು, 2014ರಲ್ಲಿ ಭಟ್ಕಳದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್​ಷಿಪ್​ನಲ್ಲಿ ಚಿನ್ನ ಹಾಗೂ ಬೆಳ್ಳಿ, 2015ರಲ್ಲಿ ಇಂಟ್ರದೋಜನ ಕುಮಿಟೆಯಲ್ಲಿ ಚಿನ್ನ ಹಾಗೂ ಕಟಾದಲ್ಲಿ ಚಿನ್ನ ಗೆದ್ದಿದ್ದಾಳೆ. ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆಯಲ್ಲಿ ಚಿನ್ನ ಹಾಗೂ ಕಂಚು, 2015ರಲ್ಲಿ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕ, 2016ರಲ್ಲಿ ಸೇಂಟ್ ಮೇರಿಸ್ ಹೈಸ್ಕೂಲ್​ನಲ್ಲಿ ನಡೆದ ಜಿಲ್ಲಾಮಟ್ಟದ ಕುಮಿಟೆಯಲ್ಲಿ ಚಿನ್ನದ ಪದಕ, 2016ರಲ್ಲಿ ಸಂತ ಜೋಸೆಫ್ ಶಾಲೆಯಲ್ಲಿ ಏರ್ಪಡಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ, 2016ರ ಮೂಡಬಿದರೆಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿ, 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್​ಷಿಪ್​ನಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. 2016ರಲ್ಲಿ ನಡೆದ ಸಮ್ಮರ್ ಕ್ಯಾಂಪ್​ನಲ್ಲಿ ಚಿನ್ನ, 2016ರಲ್ಲಿ ಕುಂದಾಪುರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಕಟಾ, ಕುಮಿಟೆ ಹಾಗೂ ಟೀಮಾ ಕಟಾದಲ್ಲಿ ಚಿನ್ನದ ಪದಕ ಪಡೆದು, ಚಿನ್ನ ಹಾಗೂ ಬೆಳ್ಳಿ, ಕಂಚಿನ ಪದಕಗಳನ್ನು ಗೆದ್ದು ಸೈ ಎನಿಸಿಕೊಂಡಿದ್ದಾಳೆ.

2017ರಲ್ಲಿ ರಾಜ್ಯಮಟ್ಟದ ಕರಾಟೆಯಲ್ಲಿ ಕಟಾ ಹಾಗೂ ಕುಮಿಟೆಯಲ್ಲಿ ಚಿನ್ನ, 2017ರಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ಕಟಾ ಹಾಗೂ ಕುಮಿಟೆ, ಟೀಮಾ ಕಟಾದಲ್ಲಿ ಚಿನ್ನದ ಪದಕ, 2017ರಲ್ಲಿ ವಲಯ ಮಟ್ಟದಲ್ಲಿ ಚಿನ್ನದ ಪದಕ, 2017ರಲ್ಲಿ ಮುಂಬಯಿ ನಿಹಾನಸಿಕಿ ಕರಾಟೆ ಮತ್ತು ಸ್ಪೋರ್ಟ್ಸ್ ಫೆಡರೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಆಲ್ ಇಂಡಿಯಾ ಕರಾಟೆಯಲ್ಲಿ ಪ್ರಕೃತಿ ಕುಮಿಟೆಯಲ್ಲಿ ಚಿನ್ನದ ಪದಕ ಹಾಗೂ ಕಟಾದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾಳೆ. ಉಡುಪಿಯ ದೊಡ್ಡಣಗುಡ್ಡೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಕೃತಿ ಕಟಾ ಹಾಗೂ ಕುಮಿಟೆಯಲ್ಲಿ ಚಿನ್ನದ ಪಡೆದು, ಅತೀ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾಳೆ.

ಮಗಳಲ್ಲಿರುವ ಕಲಿಕೆಯ ಆಸಕ್ತಿ, ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ನೋಡಿ ಸಂತಸವಾಗುತ್ತಿದೆ. ಮುಂದೆ ರಾಷ್ಟ್ರವೇ ತಿರುಗಿ ನೋಡುವಂಥ ಸಾಧನೆ ಮಾಡುತ್ತಾಳೆ ಎನ್ನುವ ನಂಬಿಕೆಯಿದೆ.

| ಮಾಣಿ ಪ್ರಮೀಳಾ ತಾಯಿ

Leave a Reply

Your email address will not be published. Required fields are marked *