ಸೂಪರ್​ಸ್ಟಾರ್​ ರಜನೀಕಾಂತ್​, ಅಕ್ಷಯ್​ ಕುಮಾರ್​ ಅಭಿನಯದ 2.0 ಚಿತ್ರದ ಮೊದಲ ಟ್ರೇಲರ್​ ಬಿಡುಗಡೆ

ಚೆನ್ನೈ: ಸೂಪರ್​ ಸ್ಟಾರ್​ ರಜನೀಕಾಂತ್​, ಅಕ್ಷಯ್​ಕುಮಾರ್​, ಆಮಿ ಜಾಕ್ಸನ್ ಅಭಿನಯದ ಬಹುನಿರೀಕ್ಷಿತ 2.0 ಸಿನಿಮಾದ ಟ್ರೇಲರ್​ ಇಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಯಿತು.

ಬಹುಕಾಲದಿಂದ ಚಿತ್ರದ ಪೋಸ್ಟರ್​ಗಳಿಂದಲೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದ 2.0 ಚಿತ್ರದ ಎರಡು ನಿಮಿಷ ಆರು ಸೆಕೆಂಡ್​ಗಳ ಟ್ರೇಲರ್​ ಬಿಡುಗಡೆಯಾಗಿದ್ದು ಅದರಲ್ಲಿ ರಜನೀಕಾಂತ್​ ಹಾಗೂ ಅಕ್ಷಯ್​ಕುಮಾರ್​ ಅವರ ಅಮೋಘ ಅಭಿನಯದ ಚಿತ್ರಣವಿದೆ.

2.0 ಚಲನಚಿತ್ರಕ್ಕೆ ಸುಮಾರು 600 ಕೋಟಿ ರೂಪಾಯಿ (75 ಮಿಲಿಯನ್​ ಡಾಲರ್​) ಬಂಡವಾಳ ಹೂಡಲಾಗಿದ್ದು ಬಹು ದುಬಾರಿ ಸಿನಿಮಾ ಎಂದೇ ಹೇಳಲಾಗುತ್ತಿದೆ. ಶಂಕರ್​ ನಿರ್ದೇಶನ ಮಾಡಿದ್ದು, ಅದಿಲ್ ಹುಸ್ಸೇನ್​, ಸುಧಾಂಶು ಪಾಂಡೆ, ಆಮಿ ಜಾಕ್ಸನ್​ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎ.ಆರ್​. ರೆಹಮಾನ್​ ಅವರ ಸಂಗೀತ ನಿರ್ದೇಶನವಿದೆ. ನವೆಂಬರ್​ 29ಕ್ಕೆ ಚಲನಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

ಟ್ರೇಲರ್​ ಬಿಡುಗಡೆಯಾದ ಬಳಿಕ ಮಾತನಾಡಿದ ಅಕ್ಷಯ್​ ಕುಮಾರ್​, ನಾನು ಸಿನಿಮಾದಲ್ಲಿ ಕಷ್ಟಕರ ಸನ್ನಿವೇಶಗಳಲ್ಲಿ ಅಭಿನಯಿಸಿ ಹಲವು ವಿಷಯಗಳನ್ನು ಕಲಿತಿದ್ದೇನೆ. ನಿರ್ದೇಶಕ ಶಂಕರ್​ ಅವರು ವಿಜ್ಞಾನಿಯಂತೆ. ಸಿನಿಮಾಕ್ಕೋಸ್ಕರ ಮೇಕಪ್​ ಮಾಡಿಕೊಳ್ಳಲು ಸುಮಾರು 3 ಗಂಟೆ ಬೇಕಾಗುತ್ತಿತ್ತು. ಅದನ್ನು ತೆಗೆಯಲು ಒಂದು ತಾಸು ಹಿಡಿಯುತ್ತಿತ್ತು. ನನ್ನನ್ನು ನಾನು ಸ್ಕ್ರೀನ್​ ಮೇಲೆ ನೋಡಿಕೊಂಡಾಗ ಇದು ನಾನೇನಾ ಎಂದು ಅನುಮಾನ ಬರುತ್ತಿತ್ತು. ನಂಬಲಸಾಧ್ಯ. ಸಿನಿಮಾವನ್ನು ನೋಡಲು ತುಂಬ ಕಾತುರನಾಗಿದ್ದೇನೆ ಎಂದು ಹೇಳಿದರು.  ಹಾಗೇ ಪ್ರಾರಂಭದಲ್ಲಿ ತಮಿಳಿನಲ್ಲೇ ಮಾತನಾಡಲು ಯತ್ನಿಸಿ, ಉಚ್ಚಾರ ತಪ್ಪಾದರೆ ಕ್ಷಮಿಸಿ ಎಂದರು.

ಇದಕ್ಕೂ ಮೊದಲು ಮಾಧ್ಯಮದ ಜತೆ ಮಾತನಾಡಿದ್ದ ಅವರು, ರಜನೀ ಸರ್​ ನಿಜಕ್ಕೂ ಸೂಪರ್​ ಸ್ಟಾರ್​. ರಜನೀಕಾಂತ್​ ಅವರ ಜತೆ ನಟಿಸಲು ಅವಕಾಶ ಮಾಡಿಕೊಟ್ಟ ನಿರ್ದೇಶಕ ಶಂಕರ್​ ಸರ್​ಗೆ ಧನ್ಯವಾದಗಳು. ಇಷ್ಟೊಂದು ವೆಚ್ಚದ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ ಎಂದಿದ್ದಾರೆ.

ನಾನೂ ಈಗಾಗಲೇ 130 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. 2.0 131ನೇ ಚಿತ್ರ. ಕಳೆದ 130 ಸಿನಿಮಾಗಳಲ್ಲಿ ಅಭಿನಯಿಸುವಾಗ ಸಣ್ಣಸಣ್ಣ ವಿಚಾರಗಳನ್ನು ಕಲಿತಿದ್ದೇನೆ. ಆದರೆ, ಈ ಚಲನಚಿತ್ರದ ಚಿತ್ರೀಕರಣದ ಉದ್ದಕ್ಕೂ ಹಲವು ಹೊಸ ಸಂಗತಿಗಳನ್ನು ಕಲಿತು, ಅನಭವಕ್ಕೆ ತಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಸೂಪರ್​ ಸ್ಟಾರ್​ ರಜನೀಕಾಂತ್​, ಪ್ರತಿಯೊಬ್ಬರೂ ಚಿತ್ರ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದಾರೆ. 2.0 ಸಿನಿಮಾ ಖಂಡಿತ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತದೆ. ಈ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ.

ಸಿನಿಮಾದಲ್ಲಿ ಕುತೂಹಲ, ಮನರಂಜನೆಯಿದೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಸಂದೇಶವಿದೆ. ಶಂಕರ್​ ಅವರು ಭಾರತೀಯ ಚಿತ್ರರಂಗದ ಜೇಮ್ಸ್​ ಕ್ಯಾಮರೂನ್​ ಇದ್ದಂತೆ. ಅವರೊಬ್ಬ ಮಾಂತ್ರಿಕ. ಈಗಲೇ ಅವರಿಗೆ ಶುಭಾಶಯ ಹೇಳುತ್ತೇನೆ ಎಂದರು.
ಹಾಗೇ ಅಕ್ಷಯ್​ ಕುಮಾರ್ ಅವರ ನಟನೆ, ಕೆಲಸದಲ್ಲಿನ ನಿಷ್ಠೆಗೆ ಹ್ಯಾಟ್ಸ್​ಆಫ್​ ಹೇಳಿದರು.