ಎಸ್ಪಿಯಾಗಿರುವ ತನ್ನ ಮಗಳಿಗೆ ಸಲ್ಯೂಟ್​ ಹೊಡೆದು ಗ್ರೇಟ್​ ಆದ್ರು ಡಿಸಿಪಿ ಶರ್ಮಾ

ಹೈದರಾಬಾದ್​: ಮಗಳಿಗೆ ಅಪ್ಪನೇ ಸಲ್ಯೂಟ್ ಮಾಡುವುದೇ? ಹೌದು. ಇಂತಹದ್ದೊಂದು ಹೃದಯಸ್ಪರ್ಶಿ ಘಟನೆ ನಡೆದದ್ದು ತೆಲಂಗಾಣದಲ್ಲಿ. ಇಲ್ಲಿ ತಂದೆ ಮಗಳ ಮೇಲಿನ ಅಭಿಮಾನಕ್ಕೆ ಸಲ್ಯೂಟ್ ಮಾಡಿದ್ದಲ್ಲ ಎನ್ನುವುದೇ ವಿಶೇಷ.

ಈ ತಂದೆ ಮಗಳಿಬ್ಬರೂ ಪೊಲೀಸ್​ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ತಂದೆ ಡಿಸಿಪಿ ಎ.ಆರ್​. ಉಮಾಮಹೇಶ್ವರ್​ ಶರ್ಮ 30 ವರ್ಷದಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಎಸ್​ಪಿ ಸಿಂಧು ಶರ್ಮ ನಾಲ್ಕು ವರ್ಷದ ಹಿಂದೆ ಇಲಾಖೆ ಸೇರಿದ್ದಾರೆ.
ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ಕರ್ತವ್ಯದಲ್ಲಿದ್ದಾಗಲೇ ಮುಖಾಮುಖಿಯಾಗಿದ್ದಾರೆ. ಅಪ್ಪ ಹಿಂದೆ ಮುಂದೆ ಯೋಚಿಸಿದೆ ಮಗಳಿಗೆ ಸಲ್ಯೂಟ್​ ಹೊಡೆದಿದ್ದಾರೆ. ಇದೊಂದು ಹೃದಯಸ್ಪರ್ಶಿ, ಹೆಮ್ಮೆಯ ಘಳಿಗೆಯಾಗಿ ಜನರ ಹೃದಯಗೆದ್ದಿದೆ.

ಉಮಾಮಹೇಶ್ವರ್​ ಶರ್ಮಾ ಅವರು ಹೈದರಾಬಾದ್​ನ ಮಲ್ಕಾಜ್​ಗಿರಿಯ ಡಿಸಿಪಿ. ಮುಂದಿನ ವರ್ಷ ನಿವೃತ್ತರಾಗಲಿರುವ ಅಧಿಕಾರಿ. ಅವರ ಮಗಳು ಸಿಂಧು ಶರ್ಮಾ 2014ರಲ್ಲಿ ಐಪಿಎಸ್​ ಪಾಸು ಮಾಡಿ ತೆಲಂಗಾಣದ ಜಗ್ತಿಯಾಲ್​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕವಾದವರು. ಭಾನುವಾರ ಹೈದರಾಬಾದ್​ನಲ್ಲಿ ನಡೆದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್​ಎಸ್​) ರ‍್ಯಾಲಿಗೆ ಭದ್ರತೆ ನೀಡಲು ಇವರಿಬ್ಬರೂ ನಿಯೋಜಿತರಾಗಿದ್ದರು. ಸಿಂಧು ಮಹಿಳೆಯರಿಗೆ ಭದ್ರತೆ ನೀಡುವ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಇಬ್ಬರೂ ಮುಖಾಮುಖಿಯಾಗುತ್ತಿದ್ದಂತೆ ತಂದೆ ಮಗಳಿಗೆ ಸಲ್ಯೂಟ್​ ಹೊಡೆದರು.
ಡಿಎಸ್​ಪಿ, ಎಸ್ಪಿ ಹುದ್ದೆ ಒಂದೇ ರೀತಿಯ ಸ್ಥಾನಮಾನ ಹೊಂದಿದ್ದರೂ ಇಲ್ಲಿ ಉಮಾಮಹೇಶ್ವರ್​ ಕೆಪಿಎಸ್​ ಕೇಡರ್​ನಲ್ಲಿ ಸೇರಿ ಸಬ್​ ಇನ್ಸ್​ಪೆಕ್ಟರ್​ ಆಗಿ ನಂತರ ಡಿಎಸ್​ಪಿ ಹುದ್ದೆಗೆ ಪ್ರಮೋಟ್​ ಆದವರು. ಮಗಳು ನೇರವಾಗಿ ಐಪಿಎಸ್​ ಉತ್ತೀರ್ಣರಾಗಿ ಬಂದವರು. ಅದೇನೇ ಇರಲಿ ಮಗಳಿಗೆ ಸಲ್ಯೂಟ್​ ಹೊಡೆದ ತಂದೆ ಎಲ್ಲರ ಕಣ್ಣಲ್ಲಿ ಮೆಚ್ಚುಗೆಗೆ ಪಾತ್ರರಾದರು.

ಇದೇ ಮೊದಲ ಬಾರಿಗೆ ಮಗಳೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಆಕೆ ನನ್ನ ಹಿರಿಯ ಅಧಿಕಾರಿ. ಹಾಗಾಗಿ ಅವಳನ್ನು ನೋಡಿದ ತಕ್ಷಣ ಸಲ್ಯೂಟ್​ ಮಾಡಿದೆ. ಮನೆಯಲ್ಲಿ ನಾವಿಬ್ಬರೂ ಕೇವಲ ಅಪ್ಪ-ಮಗಳು. ಕೆಲಸವೆಂದು ಬಂದಾಗ ಇಲ್ಲಿನ ನಿಯಮ ಪಾಲಿಸುತ್ತೇನೆ ಎಂದು ಉಮಾಮಹೇಶ್ವರ್​ ಹೆಮ್ಮೆಯಿಂದ ಮಾಧ್ಯಮಗಳೆದುರು ಹೇಳಿದ್ದಾರೆ.

ನನಗೆ ಅಪ್ಪನ ಜತೆ ಕೆಲಸ ಮಾಡಲು ಚಾನ್ಸ್​ ಸಿಕ್ಕಿದ್ದು ಅದೃಷ್ಟವೆಂದೇ ಭಾವಿಸುತ್ತೇನೆಎಂದು ಮಗಳು ಸಿಂಧು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.