More

    ಜಿಲ್ಲೆಗೆ 450 ಹಾಸಿಗೆಯ ನೂತನ ಆಸ್ಪತ್ರೆ

    ಆದರ್ಶ್ ಅದ್ಕಲೇಗಾರ್ ಮಡಿಕೇರಿ: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕೆಂದು ಹಮ್ಮಿಕೊಂಡಿದ್ದ ಜನಾಂದೋಲನದ ಫಲವಾಗಿ ಸುಮಾರು 100 ಕೋಟಿ ರೂ.ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಸದ್ಯದಲ್ಲೇ ಚಾಲನೆ ಸಿಗಲಿದೆ.
    ಹೌದು.. ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ಟ್ವಿಟರ್ ಅಭಿಯಾನದ ಬೆನ್ನಲ್ಲೇ ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಜಿಲ್ಲೆಯಲ್ಲೂ ದೊಡ್ಡ ಮಟ್ಟದಲ್ಲಿ ಅಭಿಯಾನ ಶುರುವಾಗಿತ್ತು. ದೇಶ ವಿದೇಶದಲ್ಲಿರುವ ಕೊಡಗು ಮೂಲದವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಸಿನಿಮಾ ನಟರು, ಕ್ರೀಡಾಪಟುಗಳೂ ಕೊಡಗಿನವರ ಬೇಡಿಕೆಗೆ ಬೆಂಬಲವಾಗಿ ನಿಂತಿದ್ದರು. ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಇದೊಂದು ದೊಡ್ಡ ಟ್ರೆಂಡ್ ಸಷ್ಟಿಸಿತ್ತು. ಇದಕ್ಕೆ ಪೂರಕವಾಗಿ ಹಿಂದಿನ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಕೊಡಗು ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗಾಗಿ 100 ಕೋಟಿ ರೂ.ಮೀಸಲಿರಿಸಿದ್ದು ಅಭಿಯಾನಕ್ಕೆ ದೊಡ್ಡ ಬಲ ಸಿಕ್ಕಿತ್ತು. ಹಾಗಾಗಿ ಈಗ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ.
    ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು: 2011ರ ಜನಗಣತಿ ಪ್ರಕಾರ ಪುಟ್ಟ ಜಿಲ್ಲೆ ಕೊಡಗಿನ ಜನಸಂಖ್ಯೆ 5.5 ಲಕ್ಷ. ಈ ಪ್ರಮಾಣ ಈಗ ಸುಮಾರು 7-8 ಲಕ್ಷ ತಲುಪಿರಬಹುದು. ಆದರೆ ಎಲ್ಲ ಬಗೆಯ ಆರೋಗ್ಯ ತೊಂದರೆಗಳಿಗೆ ಸೂಕ್ತ ಚಿಕಿತ್ಸೆ ಕೊಡುವ ಆಸ್ಪತ್ರೆ ಜಿಲ್ಲೆಯಲ್ಲಿ ಇಲ್ಲ. ಹೆಚ್ಚಿನ ಸಂದರ್ಭದಲ್ಲಿ ಇಲ್ಲಿ ಪ್ರಾಥಮಿಕ ಚಿಕಿತ್ಸೆ ಮಾತ್ರ ಸಿಗುತ್ತದೆ. ಹೆರಿಗೆಯಂತಹ ಕಠಿಣ ಪರಿಸ್ಥಿತಿ, ತೀವ್ರ ಹೃದಯಾಘಾತ, ರಸ್ತೆ ಅಪಘಾತದಂತಹ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗೆ ದೂರದ ಮೈಸೂರು, ಬೆಂಗಳೂರು ಅಥವಾ ಮಂಗಳೂರಿಗೆ ತೆರಳುವ ಅನಿವಾರ್ಯತೆ ಇಲ್ಲಿದೆ. ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದಿಂದ ಇದಕ್ಕೆ ಮುಕ್ತಿ ಸಿಗಲಿದೆ.
    450 ಹಾಸಿಗೆಗಳ ಆಸ್ಪತ್ರೆ: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಪ್ರಕಾರ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಲ್ಲಿ 750 ಹಾಸಿಗೆ ವ್ಯವಸ್ಥೆ ಇರಬೇಕು. ಆದರೆ ಇದೀಗ ಬೋಧಕ ಆಸ್ಪತ್ರೆಯಲ್ಲಿ(ಜಿಲ್ಲಾಸ್ಪತ್ರೆ) 300 ಹಾಸಿಗೆ ಸಾಮರ್ಥ್ಯ ಮಾತ್ರ ಇದೆ. ಇದರಿಂದಾಗಿ 450 ಹೆಚ್ಚುವರಿ ಹಾಸಿಗೆಯನ್ನು ಸೇರಿಸಬೇಕಾಗಿದ್ದು, ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಿನ ಬೋಧಕ ಆಸ್ಪತ್ರೆಯ ಕ್ಯಾಂಪಸ್‌ನಲ್ಲೇ ನೂತನ ಆಸ್ಪತ್ರೆ ಕಟ್ಟಡ ತಲೆ ಎತ್ತಲಿದೆ. ಈ ಸಂಬಂಧ ಉದ್ದೇಶಿತ ಕಟ್ಟಡದ ನೀಲಿನಕ್ಷೆಯೂ ತಯಾರಾಗಿದೆ.
    ಸದ್ಯದಲ್ಲೇ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, ಕಾಮಗಾರಿ ಮುಗಿದ ನಂತರ ಪೂರ್ಣ ಪ್ರಮಾಣದ ವೈದ್ಯಕೀಯ ಸೇವೆಗಳು ಜಿಲ್ಲೆಯ ಜನತೆಗೆ ಲಭಿಸಲಿದೆ. ತಜ್ಞ ವೈದ್ಯರು, ಸ್ಟಾಫ್ ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ ಸಂಖ್ಯೆ ಹೆಚ್ಚಾಗಲಿದೆ. ಈಗಾಗಲೇ ಮೆಡಿಕಲ್ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಅಂತಿಮ ಹಂತದ ವೈದ್ಯ ವಿದ್ಯಾರ್ಥಿಗಳು ಇಂಟರ್‌ಶಿಪ್ ಅವಧಿಯಲ್ಲಿ ದಿನದ 24 ಗಂಟೆಯಲ್ಲಿ ಎಲ್ಲ ವಿಭಾಗದಲ್ಲೂ ರೋಗಿಗಳ ಸೇವೆಗೆ ಲಭ್ಯವಿರುತ್ತಾರೆ. ಇದಲ್ಲದೆ ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭವಾಗುವ ಸಾಧ್ಯತೆಗಳೂ ಇವೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಚಾಲ್ತಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲ ವೆದ್ಯಕೀಯ ಸೌಲಭ್ಯಗಳು ಇಲ್ಲೇ ದೊರೆಯುತ್ತವೆ.

    ಮಡಿಕೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ರು.100 ಕೋಟಿ ರೂ.ವೆಚ್ಚದಲ್ಲಿ 450 ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ. ಡಿಸೆಂಬರ್ 31ರಂದು ಈ ಸಂಬಂಧ ಭೂಮಿಪೂಜೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಶೀಘ್ರದಲ್ಲೇ ಕಾರ್ಯಕ್ರಮ ನಡೆಯಲಿದೆ. ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಬೇಡಿಕೆ ಇತ್ತು. ಇದೀಗ ಇಂತಹ ಆಸ್ಪತ್ರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬೋಧಕ ಆಸ್ಪತ್ರೆಯ ಕ್ಯಾಂಪಸ್‌ನಲ್ಲೇ ನಿರ್ಮಾಣವಾಗಲಿದೆ ಎಂದು ಸಂಸದ ಪ್ರತಾಪ ಸಿಂಹ ಟ್ವೀಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

    ಆಸ್ಪತ್ರೆ ವಿಶೇಷತೆಗಳು
    ಸಾಮರ್ಥ್ಯ- 450 ಹಾಸಿಗೆ
    ಮೆಲ್ಟಿ ಸ್ಪೆಷಾಲಿಟಿ ಸೇವೆಗಳ ಘಟಕ ಆರಂಭ
    ವೈದ್ಯಕೀಯ ಸೌಲಭ್ಯ
    ಹೈಟೆಕ್ ಶಸ್ತ್ರ ಚಿಕಿತ್ಸೆ ಸೌಲಭ್ಯ
    ಆರ್ಥೊಪೆಡಿಕ್ಸ್ ಸೌಲಭ್ಯ
    ಅತ್ಯಾಧುನಿಕ ಲ್ಯಾಬ್‌ಗಳು
    ತೀವ್ರ ನಿಗಾ ಘಟಕ
    ಇಎನ್‌ಟಿ
    ಮಕ್ಕಳ ವಿಭಾಗ
    ಸ್ತ್ರೀ ಮತ್ತು ಪ್ರಸೂತಿ ರೋಗ ವಿಭಾಗ
    ಕಣ್ಣಿನ ಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯ 

    ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮದಂತೆ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಲ್ಲಿ 750 ಹಾಸಿಗೆ ವ್ಯವಸ್ಥೆ ಇರಲೇಬೇಕು. ಜಿಲ್ಲಾ ಕೇಂದ್ರ ಮಡಿಕೇರಿಯ ಬೋಧಕ ಆಸ್ಪತ್ರೆಯಲ್ಲಿ(ಜಿಲ್ಲಾಸ್ಪತ್ರೆ) 300 ಹಾಸಿಗೆ ಮಾತ್ರ ಸಾಮರ್ಥ್ಯವಿದೆ. ಈ ಹಿನ್ನೆಲೆ ಇದೀಗ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ.
    -ಡಾ.ಕಾರ್ಯಪ್ಪ, ಡೀನ್, ವೈದ್ಯಕೀಯ ಕಾಲೇಜು, ಮಡಿಕೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts