ಶಿಶುಗಳಿಗೆ ಸೂಪರ್ ಸ್ಪೆಷಾಲಿಟಿ ಕೇರ್!

< ಲೇಡಿಗೋಶನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯದ ಎನ್‌ಐಸಿಯು ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಲು ಪಣ>

ವೇಣುವಿನೋದ್ ಕೆ.ಎಸ್.ಮಂಗಳೂರು

ಲೇಡಿಗೋಶನ್ ಆಸ್ಪತ್ರೆ ಎಂದರೆ ಮೂಗುಮುರಿಯುವವರು ಈ ಸುದ್ದಿ ಓದಿದರೆ ಬೆರಗಾಗುವುದು ಖಚಿತ!
ರಾಜ್ಯದಲ್ಲೇ ಅತಿ ವಿಶಾಲ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿದ ‘ನವಜಾತ ಶಿಶುಗಳ ಚಿಕಿತ್ಸಾ ಘಟಕ’ವನ್ನು ಲೇಡಿಗೋಶನ್ ಪ್ರಸೂತಿ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ. ಮಂಗಳವಾರವೇ ಈ ಘಟಕ ಕಾರ್ಯಾರಂಭಿಸಿದೆ. ಮೂರು ಸ್ತರಗಳಲ್ಲಿ ಅತ್ಯಾಧುನಿಕ ಜೀವ ರಕ್ಷಕ ಉಪಕರಣಗಳನ್ನು ಒಳಗೊಂಡಿರುವುದು ಇದರ ಪ್ರಮುಖ ಆಕರ್ಷಣೆ.

ಹಿಂದೆ, ಇಕ್ಕಟ್ಟಿನ ಜಾಗದಲ್ಲಿ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಘಟಕವೀಗ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಮೊದಲ ದಿನ ಐದು ನವಜಾತ ಶಿಶುಗಳನ್ನು ಈ ಘಟಕಕ್ಕೆ ತರಲಾಗಿದ್ದು, ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಚಿಕಿತ್ಸೆ ಪ್ರಾರಂಭಿಸಲಾಗಿದೆ.

ಅತ್ಯಾಧುನಿಕ ಸೌಲಭ್ಯ: ಹುಟ್ಟುವಾಗಲೇ 1 ಕಿ.ಗ್ರಾಂಗಿಂತ ಕಡಿಮೆ ಇರುವ ಮಗುವಿಗೆ, ಅಪಕ್ವ ಜನನದ ಮಗುವಿಗೆ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗದು. ಅದಕ್ಕಾಗಿ ವಿಶೇಷ ಸೌಲಭ್ಯದ, ಸೋಂಕು ತಗಲದ ವಾತಾವರಣ ಇರುವ ಕೊಠಡಿ ಬೇಕು. ಲೇಡಿಗೋಶನ್ ನೂತನ ಕಟ್ಟಡದಲ್ಲಿ ಒಂದು ಹಂತವನ್ನು ನವಜಾತ ಶಿಶುಗಳ ಆರೈಕೆಗಾಗಿಯೇ ಮೀಸಲಿಡಲಾಗಿದೆ. ಅದರಲ್ಲಿರುವ ಎನ್‌ಐಸಿಯುನಲ್ಲಿ ಐದು ವೆಂಟಿಲೇಟರುಗಳು, 12ರಷ್ಟು ವಾರ್ಮರ್(ಮಕ್ಕಳ ದೇಹದ ಉಷ್ಣತೆ ಕಾಪಿಡುವ ಯಂತ್ರ), 5 ಸಿಪಾಪ್(ಧನಾತ್ಮಕ ನಿರಂತರ ಉಸಿರಿನೊತ್ತಡ) ಯಂತ್ರಗಳನ್ನು, ಪೂರಕ ಮಾನಿಟರ್‌ಗಳನ್ನು ಅಳವಡಿಸಲಾಗಿದೆ.

ಇನ್ನೂ ವೆಂಟಿಲೇಟರ್‌ಗಳು ಬರಲಿವೆ. ಜಾಂಡಿಸ್ ಬಾಧಿತ ಶಿಶುಗಳಿಗೆ ಫೊಟೊಥೆರಪಿ ವ್ಯವಸ್ಥೆಯಿದೆ. ಇದರಲ್ಲಿರುವ ವಿಶೇಷ ಲೈಟ್ ಮಕ್ಕಳಲ್ಲಿ ಜಾಂಡಿಸ್ ತರುವ ರಾಸಾಯನಿಕಗಳನ್ನು ನಿಯಂತ್ರಿಸುತ್ತವೆ. ಶಿಶುಗಳಿಗೆ ಸೋಂಕು ಹರಡದ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಸೋಂಕಿನಿಂದ ಸಾವು ತಪ್ಪಲಿದೆ: 1998ರಲ್ಲಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಎನ್‌ಐಸಿಯು ಪ್ರಾರಂಭಿಸಲಾಗಿತ್ತು. ಆಗ ಸಾಕಷ್ಟು ಸೌಲಭ್ಯಗಳಿರಲಿಲ್ಲ. ಈ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಲ್ಲಿ ಸರಾಸರಿ 400ರಷ್ಟು ಸಾಯುತ್ತಿದ್ದವು. ಸದ್ಯ ಈ ಪ್ರಮಾಣ 100ರಷ್ಟಿದೆ. ಪ್ರಮುಖವಾಗಿ ಮಕ್ಕಳು ಸೋಂಕಿನಿಂದ ಸಾಯುತ್ತವೆ ಈ ಸಾಧ್ಯತೆಯನ್ನು ಹೊಸ ಎನ್‌ಐಸಿಯು ತಪ್ಪಿಸುತ್ತದೆ ಎನ್ನುತ್ತಾರೆ ಪ್ರಾರಂಭದಿಂದಲೂ ಲೇಡಿಗೋಶನ್ ಹಾಗೂ ವೆನ್ಲಾಕ್‌ನ ಮಕ್ಕಳ ಚಿಕಿತ್ಸಾ ವಿಭಾಗದ ಪೋಷಕರಾಗಿ ನೋಡಿಕೊಳ್ಳುತ್ತಿರುವ ಡಾ.ಶಾಂತಾರಾಮ ಬಾಳಿಗ.

ಕಾಂಗರೂ ಮದರ್ ಕೇರ್!: ಲೇಡಿಗೋಶನ್ ನವಜಾತ ಶಿಶುಗಳ ಚಿಕಿತ್ಸಾ ವಿಭಾಗದಲ್ಲಿರುವ ವಾರ್ಡ್ ಇದು. ಕಡಿಮೆ ತೂಕದ ಆದರೆ ಹೆಚ್ಚು ಆರೋಗ್ಯ ಸಮಸ್ಯೆ ಇರುವ ಶಿಶುಗಳಿಗೆ ತಾಯಿಯ ಜತೆಗೇ ಇರಿಸಿಕೊಂಡು, ತಾಯಿಯ ದೇಹದ ಉಷ್ಣತೆಯಿಂದಲೇ ಆರೋಗ್ಯ ಸುಧಾರಿಸುವ ವ್ಯವಸ್ಥೆ ಇಲ್ಲಿದೆ. ಇದು 8 ಬೆಡ್ ವ್ಯವಸ್ಥೆಯ ಕಾಂಗರೂ ಕೇರ್. 25ರಷ್ಟು ಬೆಡ್ ವ್ಯವಸ್ಥೆಯ ಸ್ಟೆಪ್ ಡೌನ್ ನವಜಾತ ಶಿಶುಗಳ ವಾರ್ಡ್ ಇದೆ. ಇಲ್ಲಿ ತಾಯಿ-ಮಗು ಇಬ್ಬರೂ ಆರೋಗ್ಯ ಸುಧಾರಿಸಿಕೊಳ್ಳುವುದಕ್ಕೆ ಸೂಕ್ತ ಸೌಲಭ್ಯಗಳಿವೆ. ಅತ್ಯಾಧುನಿಕ, ನವಜಾತ ಶಿಶುಗಳ ಪ್ರತ್ಯೇಕ ಆಪರೇಷನ್ ಥಿಯೇಟರ್ ಲೇಡಿಗೋಶನ್ ಹೆಗ್ಗಳಿಕೆ. ಸದ್ಯ ಇದಕ್ಕೆ ತಜ್ಞರ ಅವಶ್ಯವಿದ್ದು, ಅವರ ನೇಮಕದ ಬಳಿಕ ಕಾರ್ಯಾರಂಭಿಸಲಿದೆ.

ಎನ್‌ಐಸಿಯು ಟೈಮ್‌ಲೈನ್
-1998ರಲ್ಲಿ ಮೊದಲ ಬಾರಿಗೆ ಲೇಡಿಗೋಶನ್‌ನಲ್ಲಿ ಪ್ರಾರಂಭ, ಪ್ರಕಾಶ್ ಬೀಡೀಸ್, ಕಾರ್ಪೊರೇಷನ್ ಬ್ಯಾಂಕ್ ನೆರವು
-2000ರಲ್ಲಿ ಉದ್ಯಮಿ ಎ.ಎಸ್.ಡಿ’ಸೋಜ ನೆರವಿನಲ್ಲಿ ವೆಂಟಿಲೇಟರ್, ಆಕ್ಸಿಜನ್ ಬ್ಯಾಂಕ್ ಸೇವೆ ಪ್ರಾರಂಭ.
-2012ರಲ್ಲಿ ‘ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕ’ ಎಂದು ಗುರುತಿಸುವಿಕೆ, ಹಾಗೂ ಸೌಲಭ್ಯ ಹೆಚ್ಚಳ.
-2019 ನೂತನ ಅತ್ಯಾಧುನಿಕ ಎನ್‌ಐಸಿಯು ಕಾರ್ಯಾರಂಭ

1998ರಿಂದ ಇದುವರೆಗಿನ ಸ್ಥಿತಿ ಹೋಲಿಸಿದರೆ, ಸಾಕಷ್ಟು ಅಭಿವೃದ್ಧಿಯಾಗಿದೆ. ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದ ಅತ್ಯುತ್ತಮ ದರ್ಜೆಯ ಎನ್‌ಐಸಿಯು ಲೇಡಿಗೋಶನ್‌ನಲ್ಲಿದೆ. ಜನರು ಇದನ್ನು ಗಮನಿಸಿ, ಪ್ರಯೋಜನ ಪಡೆದು, ಸಹಕಾರ ನೀಡಬೇಕು.
– ಡಾ.ಶಾಂತಾರಾಮ ಬಾಳಿಗ, ಮಕ್ಕಳ ತಜ್ಞರು, ಮೆಂಟರ್, ಲೇಡಿಗೋಶನ್

ಹಂತ ಹಂತವಾಗಿ ವಿವಿಧ ವಿಭಾಗಗಳನ್ನು ಲೇಡಿಗೋಶನ್ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುತ್ತಿದ್ದೇವೆ, ಈ ಪ್ರಕ್ರಿಯೆ ಕೆಲ ತಿಂಗಳು ತೆಗೆದುಕೊಳ್ಳಬಹುದು.
– ಡಾ.ಸವಿತಾ, ವೈದ್ಯಕೀಯ ಅಧೀಕ್ಷಕಿ, ಲೇಡಿಗೋಶನ್.

ಹಿಂದಿನ ಎನ್‌ಐಸಿಯುನಲ್ಲಿ ಜಾಗ ಇರಲಿಲ್ಲ, ತುಂಬಾ ಇಕ್ಕಟ್ಟಾಗಿತ್ತು. ಈಗ ವಿಶಾಲವಾಗಿ, ಹೆಚ್ಚು ಸೌಲಭ್ಯಗಳಿವೆ. ಇಲ್ಲಿ ಸೇವೆ ಸಲ್ಲಿಸಲು ಖುಷಿಯಾಗುತ್ತದೆ.
-ವಿದ್ಯಾ, ಎನ್‌ಎಚ್‌ಎಂ ನರ್ಸ್