ಪತ್ನಿ-ಪುತ್ರನ ಹತ್ಯೆಗೆ ಸುಪಾರಿ!

ಶಿವಮೊಗ್ಗ: ತಾಯಿ-ಮಗನ ಹತ್ಯೆ ಮಾಡಲು ಸುಪಾರಿ ಪಡೆದಿದ್ದವರಿಗೆ ಮನಪರಿವರ್ತನೆ ಆಗಿ ಹತ್ಯೆಯಿಂದ ಹಿಂದೆ ಸರಿದಿದ್ದಲ್ಲದೆ ಸುಪಾರಿ ನೀಡಿದವನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎರಡು ಜೀವಗಳನ್ನು ಉಳಿಸಿದ ಅಪರೂಪದ ಪ್ರಕರಣ ಭದ್ರಾವತಿಯಲ್ಲಿ ನಡೆದಿದೆ.

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಮುಖ್ಯಪೇದೆ ರವೀಂದ್ರ ಗಿರಿ ತನ್ನ ಪತ್ನಿ ಹಾಗೂ ಎಂಟು ವರ್ಷದ ಮಗನ ಹತ್ಯೆಗೆ ಸುಪಾರಿ ನೀಡಿದ್ದ. ಪತ್ನಿ ಜತೆಗಿನ ಮನಸ್ತಾಪ, ಮತ್ತೊಬ್ಬಾಕೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ದಿಂದಾಗಿ ರವೀಂದ್ರ ಈ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ರವೀಂದ್ರ ಗಿರಿ ತಲೆಮರೆಸಿಕೊಂಡಿದ್ದು, ಆತ ಕಾರ್ಯನಿರ್ವಹಿಸುತ್ತಿದ್ದ ಠಾಣೆಯಲ್ಲೇ ಪ್ರಕರಣ ದಾಖಲಾಗಿದೆ.

ಪತ್ನಿ-ಮಗನ ಹತ್ಯೆಗಾಗಿ ಶಿವಮೊಗ್ಗ ಇಲಿಯಾಸ್ ನಗರದ ಫೈರೋಜ್ ಖಾನ್, ಸೈಯದ್ ಇರ್ಫಾನ್, ಸುಹೇಲ್​ಗೆ ರವೀಂದ್ರ 20 ದಿನಗಳ ಹಿಂದೆ ಸುಪಾರಿ ನೀಡಿದ್ದ. ಆದರೆ ದೂರದಿಂದ ತಾಯಿ-ಮಗನನ್ನು ಕಂಡ ಹಂತಕರ ಮನಸ್ಸು ಕರಗಿ, ಕೊಲೆ ಮಾಡುವುದು ಬೇಡ ಎಂದು ನಿರ್ಧರಿಸಿದರು.

ಹಂತಕರು ಬೇರೆ ಪ್ರಕರಣದಲ್ಲಿ ಭದ್ರಾವತಿ ಹೊಸಮನೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಒಬ್ಬನ ಜೇಬಿನಲ್ಲಿ ಮಹಿಳೆಯ ಫೋಟೋ ಸಿಗುತ್ತದೆ. ವಿಚಾರಣೆ ತೀವ್ರಗೊಳಿಸಿದಾಗ ಅದು ಅನಿತಾ ಫೋಟೋ, ರವೀಂದ್ರ ಗಿರಿ ಹತ್ಯೆಗೆ ಸುಪಾರಿ ನೀಡಿದ್ದ ಎಂಬ ವಿಷಯ ಬಯಲಾಗುತ್ತದೆ.