12 ವರ್ಷಗಳ ಬಳಿಕ ಭರ್ತಿಯಾದ ಸೂಪಾ ಜಲಾಶಯ: ವಿಡಿಯೋ ನೋಡಿ

ಕಾರವಾರ/ದಾಂಡೇಲಿ/ಜೊಯಿಡಾ: ರಾಜ್ಯದ ಅತೀ ಎತ್ತರದ ಜಲಾಶಯ ಸೂಪಾ ಹನ್ನೆರಡು ವರ್ಷಗಳ ಬಳಿಕ ಈ ಬಾರಿ  ಭರ್ತಿಯಾಗಿದ್ದು, ಬುಧವಾರ ನೀರು ಹೊರ ಬಿಡಲಾಗಿದೆ. 564 ಮೀಟರ್ (ಸಮುದ್ರ ಮಟ್ಟದಿಂದ) ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ 562.75 ಮೀಟರ್​ವರೆಗೆ ನೀರು ಸಂಗ್ರಹವಾಗಿತ್ತು. 16,500 ಕ್ಯೂಸೆಕ್ ಒಳಹರಿವಿತ್ತು.

ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಬುಧವಾರ ಮಧ್ಯಾಹ್ನ 3 ಗಂಟೆ 10 ನಿಮಿಷಕ್ಕೆ 3 ಗೇಟ್​ಗಳನ್ನು ಅರ್ಧ ಅಡಿ ತೆರೆದು ಪ್ರತಿ ಸೆಕೆಂಡ್​ಗೆ 7 ಸಾವಿರ ಕ್ಯೂಬಿಕ್ ಅಡಿ (ಕ್ಯೂಸೆಕ್-ಪ್ರತಿ ಸೆಕೆಂಡ್​ಗೆ 28.317 ಲೀಟರ್) ನೀರು ಹೊರ ಬಿಡಲಾಗುತ್ತಿದೆ. ಅಲ್ಲದೆ, ಸೂಪಾ ಜಲಾಶಯದ ಕೆಳಗಿರುವ ವಿದ್ಯುದಾಗಾರದಿಂದ 150 ಮೆಗಾವ್ಯಾಟ್​ನ ಎರಡು ಟರ್ಬೆನ್​ಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, 4,300 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ 562 ಮೀಟರ್​ಗೆ ತಲುಪುವವರೆಗೂ ಅಂದರೆ, ಆ. 30ರ ಮಧ್ಯಾಹ್ನದವರೆಗೂ ಇದೇ ಹಂತದಲ್ಲಿ ನೀರು ಹೊರ ಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಐತಿಹಾಸಿಕ ಕ್ಷಣ: 1987ರಲ್ಲಿ ನಿರ್ಮಾಣಗೊಂಡ ಜಲಾಶಯ 31 ವರ್ಷಗಳಲ್ಲಿ ಎರಡೇ ಬಾರಿ ಸಂಪೂರ್ಣ ಭರ್ತಿಯಾಗಿತ್ತು. ಬುಧವಾರ ಮೂರನೇ ಬಾರಿ ನೀರು ಹೊರಬಿಡಲಾಯಿತು. ಸಮೀಪದ ಗ್ರಾಮಗಳ ನೂರಾರು ಜನ ನೀರು ಬಿಡುವ ಕ್ಷಣವನ್ನು ಕಣ್ತುಂಬಿಕೊಂಡರು. ಜಲಾಶಯ ಭರ್ತಿಯ ಹಂತ ತಲುಪಿದ್ದರಿಂದ ಆ. 15ರಂದೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. 1994ರ ಆಗಸ್ಟ್ 27, 2006ರ ಅಕ್ಟೋಬರ್ 4ರಂದು ಜಲಾಶಯದ ಗೇಟ್ ತೆರೆದು ನೀರು ಹೊರಬಿಡಲಾಗಿತ್ತು. 2007, 2011 ಹಾಗೂ 2014ರಲ್ಲಿ ಭರ್ತಿಯಾಗುವ ಹಂತ ತಲುಪಿತ್ತು.

ನಿರಂತರ ವಿದ್ಯುತ್ ಉತ್ಪಾದನೆ: ಕಾಳಿ ಜಲವಿದ್ಯುತ್ ಯೋಜನೆ ಪ್ರಮುಖ ಜಲಾಶಯ ಸೂಪಾ ಭರ್ತಿಯಾಗುತ್ತಿರುವುದರಿಂದ ಇಲ್ಲಿ ನಿರಂತರ ವಿದ್ಯುತ್ ಉತ್ಪಾದನೆ ಮಾಡಿ ನೀರು ಹೊರಬಿಡುವ ಮೂಲಕ ಕೆಪಿಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ. ಸೂಪಾ ಜಲಾಶಯದ ಸಮೀಪ ಇರುವ 150 ಮೆಗಾವ್ಯಾಟ್​ನ ಎರಡು ಘಟಕಗಳು ಹಾಗೂ ನಾಗಝುರಿ ಪವರ್ ಹೌಸ್​ನಲ್ಲಿರುವ 150 ಮೆಗಾವ್ಯಾಟ್​ನ 6 ಘಟಕಗಳ ಮೂಲಕ ಕಳೆದ ಕೆಲ ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದ ವಿದ್ಯುತ್ ಬೇಡಿಕೆಯನ್ನು ಜಲವಿದ್ಯುತ್ ಘಟಕಗಳ ಮೂಲಕವೇ ಪೂರೈಸಿ ಉಷ್ಣ ವಿದ್ಯುತ್ ಸ್ಥಾವರಗಳ ಮೇಲಿನ ಒತ್ತಡ ಕಡಿಮೆ ಮಾಡಲಾಗುತ್ತಿದೆ.

ಬೊಮ್ಮನಹಳ್ಳಿಯೂ ಭರ್ತಿ ಸಾಧ್ಯತೆ: ಸೂಪಾ ಜಲಾಶಯದಿಂದ ಬಿಟ್ಟ ನೀರು ಅದರ ಕೆಳಗಿರುವ ಬೊಮ್ಮನಹಳ್ಳಿಗೆ ಸೇರುತ್ತದೆ. ಆ ಜಲಾಶಯವೂ ಭರ್ತಿ ಹಂತದಲ್ಲಿದೆ. 438.38 ಮೀಟರ್ ಸಂಗ್ರಣಾ ಸಾಮರ್ಥ್ಯವಿರುವ ಬೊಮ್ಮನಹಳ್ಳಿಯಲ್ಲಿ 435 ಮೀಟರ್​ಗಿಂತ ಹೆಚ್ಚು ನೀರು ಸಂಗ್ರಹವಾಗಿದೆ. ತುಂಬುಲು ಇನ್ನೂ 2 ಟಿಎಂಸಿಯಷ್ಟು ನೀರು ಬೇಕಿದೆ. ಸೂಪಾ ಜಲಾಶಯದಿಂದ ಬುಧವಾರ ವಿದ್ಯುತ್ ಉತ್ಪಾದನೆ ಹಾಗೂ ನೇರವಾಗಿ ಸೇರಿ ಒಟ್ಟು 11,300 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇಷ್ಟು ನೀರನ್ನು 24 ಗಂಟೆ ನಿರಂತರವಾಗಿ ಹೊರ ಬಿಟ್ಟಲ್ಲಿ 1 ಟಿಎಂಸಿ ನೀರು ತುಂಬಲಿದೆ. ಆದರೆ, ಬೊಮ್ಮನಹಳ್ಳಿಯಿಂದ ನೀರು ಹೊರ ಬಿಡುವುದನ್ನು ತಪ್ಪಿಸಲು ಕೆಪಿಸಿ ನಾಗಝುರಿಯಲ್ಲಿ ನಿರಂತರ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.

ಪ್ರವಾಹದ ಭೀತಿ ಇಲ್ಲ: ಸೂಪಾದಿಂದ ಬೊಮ್ಮನಹಳ್ಳಿ ಜಲಾಶಯದವರೆಗೆ ದಾಂಡೇಲಿ ನಗರ ಇಳವಾ, ಮೌಳಂಗಿ, ಬೀರಂಪಾಲಿ ಇತರ ಗ್ರಾಮಗಳು ಬರುತ್ತವೆ. ನೀರು ಬಿಟ್ಟಿದ್ದರಿಂದ ನದಿ ಅಪಾಯದ ಮಟ್ಟದಲ್ಲಿ ಹರಿಯಬಹುದು. ಆದರೆ, ಯಾವುದೇ ಪ್ರವಾಹ ಸಂಭವಿಸುವ ಸಾಧ್ಯತೆ ಇಲ್ಲ. ಬೊಮ್ಮನಹಳ್ಳಿ ಜಲಾಶಯದಿಂದ ನೀರು ಹೊರಬಿಟ್ಟರೆ ಕೆಲವೆಡೆ ತೊಂದರೆ ಉಂಟಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅಣೆಕಟ್ಟೆಗಳ ಸುರಕ್ಷತೆ, ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡುವತ್ತ ಗಮನ ಹರಿಸುತ್ತಿದ್ದೇವೆ. ಒಮ್ಮೆಲೇ ಹೆಚ್ಚು ನೀರು ಬಿಟ್ಟು ಪ್ರವಾಹ ಸೃಷ್ಟಿಸುತ್ತಿಲ್ಲ. ಆದಷ್ಟು ವಿದ್ಯುತ್ ಉತ್ಪಾದನೆ ಮಾಡಿಯೇ ನೀರು ಹೊರಬಿಡಲಾಗುತ್ತಿದೆ.
| ಅಬ್ದುಲ್ ಮಜೀದ್, ಸುಪರಿಟೆಂಡೆಂಟ್ ಇಂಜಿನಿಯರ್, ಜಲಾಶಯ ವಿಭಾಗ ಸೂಪಾ