ಪತ್ನಿ, ಮಗಳ ಆತ್ಮಹತ್ಯೆ, ಪತಿಗೆ ಸಜೆ

ಗಂಡನ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ಆತ್ಮಹತ್ಯೆ ಶರಣಾಗಿದ್ದ ಗೃಹಿಣಿ

ಸುಂಟಿಕೊಪ್ಪ: ಪತಿಯ ಹಿಂಸೆ ತಾಳಲಾರದೆ ಗೃಹಿಣಿಯೊಬ್ಬರು ಆರು ವರ್ಷದ ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿದ ಪತಿಗೆ ೭ ವರ್ಷ ಕಠಿಣ ಸಜೆ ಮತ್ತು ೧೨,೫೦೦ ರೂ. ದಂಡ ವಿಧಿಸಿ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕೊಡಗರಹಳ್ಳಿ ಗ್ರಾಮದ ಸುಭಾಷ್ ಪೈ ಅವರ ಚೌಡಿಕಾಡು ತೋಟದ ಲೈನ್ ಮನೆಯಲ್ಲಿ ಕೂಲಿ ಮಾಡಿಕೊಂಡಿದ್ದ ಮಾದೇವಶೆಟ್ಟಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಪತ್ನಿ ದೊಡ್ಡಮ್ಮ ದಂಪತಿ ಹಾಗೂ ೬ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದ. ಮಾದೇವ ಶೆಟ್ಟಿ ನಿತ್ಯ ಕುಡಿದು ಬಂದು ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ.
ಇದರಿಂದ ಬೇಸತ್ತ ಪತ್ನಿ ದೊಡ್ಡಮ್ಮ ಮಗಳೊಂದಿಗೆ ತವರು ಮನೆಗೆ ತೆರಳಿದ್ದರು. ಅಂದು ಸಂಜೆಯೇ ಪತ್ನಿಯನ್ನು ಹುಡುಕಿಕೊಂಡು ಮಾವನ ಮನೆಗೆ ಬಂದ ಆರೋಪಿ ಮಾದೇವ ಶೆಟ್ಟಿ ಪತ್ನಿಯೊಂದಿಗೆ ಜಗಳವಾಡಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದ. ಮಾರನೆಯ ದಿನ ಗಂಡನ ಕಿರುಕುಳಕ್ಕೆ ಬೇಸತ್ತು ತನ್ನ ೬ ವರ್ಷದ ಮಗಳೊಂದಿಗೆ ಸಮೀಪ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾದೀಶರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಕೃಷ್ಣವೇಣಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *