ಕಾಫಿನಾಡಲ್ಲಿ ಮತದಾನ ಶಾಂತಿಯುತ

ಚಿಕ್ಕಮಗಳೂರು: ಬೇಸಿಗೆ ಬಿಸಿಲ ತಾಪದ ನಡುವೆ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷಗಳು ಕಂಡುಬಂದು ಮತದಾನ ಪ್ರಕ್ರಿಯೆ ಕೊಂಚ ವಿಳಂಬವಾಗಿರುವುದನ್ನು ಹೊರತುಪಡಿಸಿದರೆ ಯಾವುದೆ ಅಹಿತಕರ ಘಟನೆಗಳಿಗೆ ಆಸ್ಪದವಾಗಿಲ್ಲ. ಬಹುತೇಕ ಎಲ್ಲ ಮತಗಟ್ಟೆಗಳ ಬಳಿ ಜನಜಂಗುಳಿ ಆಗದಿರುವುದರಿಂದ ರಕ್ಷಣಾ ಸಿಬ್ಬಂದಿ ಒತ್ತಡವಿಲ್ಲದೆ ಕಾರ್ಯನಿರ್ವಹಿಸಿದರು.

ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಬೆಳಗ್ಗೆ ಮತದಾರರು ಹಕ್ಕು ಚಲಾಯಿಸಲು ಉತ್ಸಾಹ ತೋರಿದರೆ ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ಮತಗಟ್ಟೆ ಕಡೆಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಯಿತು. ಮಧ್ಯಾಹ್ನದ ಉರಿಬಿಸಲು ಇಳಿಮುಖವಾಗುತ್ತಿದ್ದಂತೆ ಮತ್ತೆ ಮತದಾನ ಬಿರುಸುಗೊಂಡಿತು. ಬಯಲು ಭಾಗದ ಕೆಲವೆಡೆ ಮಳೆಯಾಗಿರುವ ಕಾರಣ ಕೃಷಿ ಚಟುವಟಿಕೆಯತ್ತ ದೃಷ್ಟಿ ಕೇಂದ್ರೀಕರಿಸಿದ್ದ ರೈತರು ಮಧ್ಯಾಹ್ನದ ಬಳಿಕ ಮತದಾನದಲ್ಲಿ ಪಾಲ್ಗೊಂಡರು.

ಗ್ರಾಮಾಂತರ ಭಾಗದ ಮತಗಟ್ಟೆಗಳ ಬಳಿ ಸಾಮಾನ್ಯವಾಗಿ ಇರುತ್ತಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರ ಗುಂಪಾಗಲಿ, ಪೈಪೋಟಿಯ ಮೇಲೆ ಮತದಾರರನ್ನು ಸೆಳೆಯುವ ಪ್ರಯತ್ನ ಈ ಬಾರಿ ಕಾಣದಿರುವುದು ವಿಶೇಷ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮತದಾರ ಗಂಭೀರವಾಗಿ ಹಕ್ಕು ಚಲಾಯಿಸಿದ್ದು ಕಂಡುಬಂತು.

ಇವಿಎಂ ದೋಷ: ಚಿಕ್ಕಮಗಳೂರಿನ ಪುರ್ಖಾನಿಯ ಶಾದಿ ಮಹಲ್ ಸಮೀಪದ ಉರ್ದು ಶಾಲೆ ಮತಗಟ್ಟೆ 164ರಲ್ಲಿ ಆರಂಭದಿಂದಲೇ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಬೆಳಗ್ಗೆ 8.30 ಆದರೂ ಮತದಾನ ಆರಂಭವಾಗಿರಲಿಲ್ಲ. ತಾಂತ್ರಿಕ ಸಿಬ್ಬಂದಿ ಆಗಮಿಸಿ ದುರಸ್ತಿ ಮಾಡಲು ಯತ್ನಿಸಿದರೂ ಸರಿಹೋಗದ ಕಾರಣ ಮತಯಂತ್ರವನ್ನೇ ಬದಲಿಸಲಾಯಿತು. ನಂತರ ಮತದಾನ ಪ್ರಕ್ರಿಯೆ ಮುಂದುವರಿಯಿತು.

ಗೃಹಮಂಡಳಿ ಬಡಾವಣೆಯ ಮತಗಟ್ಟೆ ಸಂಖ್ಯೆ 27ರಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆವರೆಗೆ ಮೂರು ಬಾರಿ ಮತಯಂತ್ರ ದುರಸ್ತಿಗೆ ಒಳಗಾಯಿತು. ತಾಂತ್ರಿಕ ಸಿಬ್ಬಂದಿ ಪದೇಪದೆ ಅದನ್ನು ದುರಸ್ತಿಪಡಿಸಿದರು. ಈ ಕಿರಿಕಿರಿಯಿಂದ ಮತದಾರರು ಅಸಮಾಧಾನಗೊಂಡಿದ್ದರು.

ನೆರವಿನಲ್ಲಿ ಮತ ಚಲಾಯಿಸಿದವರು: ಹುಲಿಕೆರೆಯಲ್ಲಿ 90 ವರ್ಷದ ಮರುಳಸಿದ್ದಮ್ಮ ಹಾಗೂ ಕರ್ತಿಕೆರೆಯಲ್ಲಿ 96 ವರ್ಷದ ನಾಗಪ್ಪ ಶೆಟ್ಟಿ ಸಂಬಂಧಿಕರ ನೆರವಿನಲ್ಲಿ ಮತದಾನ ಮಾಡಿದರೆ, ಅದೇ ಬೂತ್​ನಲ್ಲಿ ಅಂಧ ವೃದ್ಧೆ ನಂಜಮ್ಮ ಹಾಗೂ ನಾಗರಾಳುವಿನಲ್ಲಿ ವ್ಯಕ್ತಿಯೊಬ್ಬರು ವ್ಹೀಲ್​ಚೇರ್ ಆಸರೆಯಲ್ಲಿ ಮತ ಚಲಾಯಿಸಿದರು. ಬೆಳವಾಡಿಯಲ್ಲಿ 90 ವರ್ಷದ ಚೆಲುವಯ್ಯ ಜಿಲ್ಲಾಡಳಿತ ಒದಗಿಸಿದ್ದ ವಾಹನದಲ್ಲಿ ಆಗಮಿಸಿ ಹಕ್ಕು ಚಲಾಯಿಸಿದರು. ಸಿಂದಿಗೆರೆಯಲ್ಲಿ ಗೃಹಿಣಿ ಶಂಕರಮ್ಮ ಮೊದಲ ಬಾರಿ ಮತ ಹಾಕಿದ ಸಂಭ್ರಮದಲ್ಲಿದ್ದರು.

ಅಭ್ಯರ್ಥಿ ಸೇರಿ ಪ್ರಮುಖರ ಭೇಟಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಮತ ಚಲಾಯಿಸಿ 11 ಗಂಟೆ ವೇಳೆಗೆ ಚಿಕ್ಕಮಗಳೂರು ನಗರಕ್ಕೆ ಆಗಮಿಸಿ ಹಲವು ಮತಗಟ್ಟೆಗಳಿಗೆ ಭೇಟಿ ಕೊಟ್ಟು ಕಾರ್ಯಕರ್ತರನ್ನು ಮಾತನಾಡಿಸಿ ಹುರಿದುಂಬಿಸಿದರು. ಪಕ್ಷದಿಂದ ಸ್ಥಾಪಿಸಲಾದ ಮಾಹಿತಿ ಕೇಂದ್ರದಲ್ಲಿ ಕುಳಿತು ಹಲವೆಡೆ ಬೆಂಬಲಿಗರ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡರು. ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ನಗರದ ಹಲವು ಬೂತ್​ಗಳಿಗೆ ಭೇಟಿ ನೀಡಿ ಬೆಂಬಲಿಗರನ್ನು ಮಾತನಾಡಿಸಿ ಮತ ಸೆಳೆಯುವ ಪ್ರಯತ್ನ ನಡೆಸಿದರು.

ಹಣ-ಹೆಂಡದ ಹಂಗಿರಲಿಲ್ಲ:ಈ ಚುನಾವಣೆಯಲ್ಲಿ ತಾಲೂಕಿನ ಅಭ್ಯರ್ಥಿಗಳು ಹಂಚುವ ಹಣ-ಹೆಂಡದ ಹಂಗಿಲ್ಲ. ಮತದಾರರನ್ನು ಸರಣಿ ಆಮಿಷಗಳೂ ಅರಸಿ ಬರಲಿಲ್ಲ. ಉದ್ವೇಗ, ಒತ್ತಡ, ಬೆದರಿಕೆಯ ಆತಂಕವಿರಲಿಲ್ಲ. ಅಷ್ಟೇ ಯಾವುದೇ ಮತಗಟ್ಟೆಗಳ ಬಳಿ ಮದ್ಯದ ಘಾಟು-ಅಮಲು ಇರಲಿಲ್ಲ ಎನ್ನುವುದು ಈ ಬಾರಿಯ ವಿಶೇಷ. ಮತಗಟ್ಟೆ ಬಳಿ ಯಾವುದೆ ರಾಜಕೀಯ ಪಕ್ಷಗಳು ಶಾಮಿಯಾನ ಹಾಕುವುದು, ಧ್ವಜ ಪ್ರದರ್ಶಿಸುವುದನ್ನು ಈ ಬಾರಿ ನಿಷೇಧಿಸಲಾಗಿತ್ತು. ಮತದಾರರ ಅನುಕೂಲಕ್ಕಾಗಿ ಜಿಲ್ಲಾಡಳಿತವೇ ಮಾಹಿತಿ ಕೇಂದ್ರಗಳನ್ನು ತೆರೆದಿತ್ತು.

ಕಾರ್ಯಕರ್ತರಿಗೂ ಹಣವಿಲ್ಲ :ರಾಜಕೀಯ ಪಕ್ಷಗಳು ಈ ಹಿಂದಿನಂತೆ ಹೋಲಿಸಿದರೆ ಹಣಕಾಸಿನ ವ್ಯವಸ್ಥೆ ಕಲ್ಪಿಸದ ಕಾರಣ ಕಾರ್ಯಕರ್ತರ ಚಟುವಟಿಕೆ ಕಂಡು ಬರುತ್ತಿಲ್ಲ ಎಂದು ಮತಗಟ್ಟೆ ಬಳಿ ಕೆಲವರು ಹೇಳುತ್ತಿದ್ದುದು ಕೇಳಿ ಬಂದಿತು. ಹೀಗಾಗಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಮೈತ್ರಿಕೂಟದ ಅಭ್ಯರ್ಥಿ ಜೆಡಿಎಸ್​ನ ಪ್ರಮೋದ್ ಮಧ್ವರಾಜ್ ನಡುವೆ ನೇರ ಸ್ಪರ್ಧೆ ಇದ್ದರೂ ಯಾವುದೆ ಮತಗಟ್ಟೆ ಬಳಿ ಯಾವುದೆ ಪಕ್ಷದ ಕಾರ್ಯಕರ್ತರ ಉತ್ಸಾಹದ ಚಟುವಟಿಕೆ ಇರಲಿಲ್ಲ. ಕೆಲವು ಮತಗಟ್ಟೆಗಳ ಬಳಿ ಇದ್ದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಬಳಿ ಹಲವು ಬಿಜೆಪಿ ಬೆಂಬಲಿಗರಲ್ಲಷ್ಟೆ ಉತ್ಸಾಹವಿತ್ತು.

ಚುನಾವಣೆ ಸಂದರ್ಭ ಸಾಮಾನ್ಯವಾಗಿ ಬಿರುಸಿನ ರಾಜಕೀಯ ಚಟುವಟಿಕೆಯಿಂದ ಕೂಡಿರುತ್ತಿದ್ದ ತಾಲೂಕಿನ ಸಿಂದಿಗೆರೆ ಗ್ರಾಮ ಗುರುವಾರ ಭಣಗುಡುತ್ತಿತ್ತು. ಮತಗಟ್ಡೆ ಬಳಿ ಸಾಲುಗಟ್ಟಿ ನಿಂತಿದ್ದ ಮತದಾರರನ್ನು ಹೊರತುಪಡಿಸಿದರೆ ಪಕ್ಷದ ಸಕ್ರಿಯ ಕಾರ್ಯಕರ್ತರೆನಿಸಿಕೊಂಡು ಕಾಣಿಸಿಕೊಳ್ಳಲಿಲ್ಲ. ಈ ಸಲ ಯಾವುದೆ ಪಕ್ಷದ ಕಡೆಯಿಂದ ಹಣ ಬಂದಿಲ್ಲ. ಹೀಗಾಗಿ ತಮಗೆ ಚುನಾವಣೆಯ ಗೊಡವೆ ಬೇಡ ಎಂದು ಎಲ್ಲ ಮನೆ ಸೇರಿಕೊಂಡಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಗುಳೆ ಹೋಗಿದ್ದವರನ್ನು 2 ಸಾವಿರ ರೂ. ಹಾಗೂ ಬಸ್ ದರ ನೀಡಿ ಕರೆಸಿಕೊಂಡು ಮತ ಹಾಕಿಸಿಸಲಾಗಿತ್ತು. ಈ ಬಾರಿ ಯಾರೂ ಅಂತಹ ಉತ್ಸಾಹ ತೋರಿಸಲಿಲ್ಲ. ಚುನಾವಣೆಗಳು ಹೀಗೆ ನಡೆದರೆ ಉತ್ತಮ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದರು.

ಅಲ್ಲೊಬ್ಬರು, ಇಲ್ಲೊಬ್ಬರು ಜೆಡಿಎಸ್ ಹಾಗೂ ಬಿಜೆಪಿಯ ಪ್ರಮುಖ ಕಾರ್ಯಕರ್ತರು ಕಾಣಿಸಿಕೊಂಡದ್ದನ್ನು ಬಿಟ್ಟರೆ ಕಳಸಾಪುರದ ಮತಗಟ್ಟೆ ಬಳಿ ಸಹ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿರಲಿಲ್ಲ. ಮತದಾರರು ಸ್ವಯಂ ಪ್ರೇರಣೆಯಿಂದ ಬಂದು ಅವರ ಪಾಡಿಗೆ ಅವರು ಮತ ಹಾಕಿ ಹೋಗುತ್ತಿದ್ದಾರೆ. ಯಾವ ಪಕ್ಷದವರು ಹಣ ಹಂಚದ ಕಾರಣಕ್ಕೆ ಮತಗಟ್ಟೆ ಬಳಿ ಯಾವುದೇ ಕಾರ್ಯಕರ್ತರ ಅಬ್ಬರವಿಲ್ಲ. ಇದೇ ರೀತಿ ಮುಂದಿನ ಎರಡು ಚುನಾವಣೆಗಳು ನಡೆದರೆ ಮತದಾನಕ್ಕೆ ಹಣದ ಪ್ರಭಾವ ಕಡಿಮೆಯಾದೀತು ಎನ್ನುತ್ತಾರೆ ಬಿಜೆಪಿಯ ಕೆ.ಬಿ.ಚಂದ್ರಶೇಖರ್.

ದುಡ್ಡುಕೊಟ್ಟಿಲ್ಲ, ಮತ ಏಕೆ ಹಾಕಬೇಕು?

ಕುರುಬರ ಬೂದಿಹಾಳ್ ಗ್ರಾಮದ ಮತಗಟ್ಟೆ ಸಮೀಪ ಮಂಜುನಾಥ ಎಂಬುವರಿಗೆ ಈ ಬಾರಿ ಯಾವ ಪಕ್ಷದವರೂ ಹಣ ಕೊಡಲಿಲ್ಲ ಎಂಬುದೇ ದೊಡ್ಡ ಚಿಂತೆ. ಪ್ರತೀ ಸಲ ಹಣ ಕೊಡುತ್ತಿದ್ದವರು ಈ ಬಾರಿ ನಮ್ಮನ್ನು ಮಾತನಾಡಿಸಲೇ ಬಂದಿಲ್ಲ. ಮತ ಯಾಕೆ ಹಾಕಬೇಕು ಎಂದು ನೇರವಾಗಿ ಪತ್ರಕರ್ತರನ್ನೇ ಕೇಳಿದ ಅವರು, ನನಗೆ ಇಷ್ಟವಾದವರಿಗೆ ಮತ ಹಾಕುತ್ತೇನೆ ಬಿಡಿ ಎಂದರು. ಅಷ್ಟಕ್ಕೂ ಮತ ಹಾಕಲು ಹಣ ಕೊಡದ ಅಸಮಾಧಾನವೇ ಬಹುತೇಕ ಎಲ್ಲ ಮತಗಟ್ಟೆಗಳ ಬಳಿ ಕಂಡು ಬಂತು. ಪ್ರತೀ ವರ್ಷದಂತೆ ಈ ಬಾರಿಯೂ ತಾಲೂಕಿನಲ್ಲಿ ಬರ ಆವರಿಸಿದೆ. ಬಯಲು ಭಾಗದಲ್ಲಿ ಬಿಸಿಲ ತಾಪದಿಂದ ರೈತರು ಮಂಕಾಗಿದ್ದು, ಮತಗಟ್ಟೆ ಸಮೀಪದ ಸಣ್ಣಪುಟ್ಟ ಅಂಗಡಿಗಳು, ಅರಳಿ ಕಟ್ಟೆ, ಮನೆ ಜಗುಲಿಗಳಲ್ಲಿ ಆಶ್ರಯ ಪಡೆದ ಊರ ಹಿರಿಯರ ಗುಂಪು ಗಹನವಾದ ಚರ್ಚೆಯಲ್ಲಿ ತೊಡಗಿದ್ದು ಕಂಡು ಬಂದಿತು.

ಮೋದಿಗಾಗಿ ಬಿಜೆಪಿಗೆ ಮತ

ಸಿಂದಿಗೆರೆಯ ಮುಚ್ಚಿದ ಅಂಗಡಿ ಎದುರಲ್ಲಿ ಕುಳಿತಿದ್ದ ಸುಮಾರು ಆರೇಳು ಮಂದಿಯ ಗುಂಪು ತಾವೆಲ್ಲ ದೇಶದ ಭದ್ರತೆಗಾಗಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿ ಬಿಜೆಪಿಗೆ ಮತ ನೀಡುತ್ತಿರುವುದಾಗಿ ಹೇಳಿತು. ಸ್ಥಳೀಯವಾಗಿ ಹಲ ಕೆಲವು ಸಮಸ್ಯೆಗಳಿದ್ದರೂ ಉಚಿತ ಗ್ಯಾಸ್ ಸಂಪರ್ಕ, ರೈತರ ಖಾತೆಗೆ ನೇರವಾಗಿ 2 ಸಾವಿರ ರೂ. ನಗದು ಜಮಾ ಹೀಗೆ ಹಲವು ಪ್ರಯೋಜನ ದೊರಕಿವೆ ಎಂದು ಸ್ಥಳೀಯರಾದ ಮೋಕ್ಷನಾಥ್ ಮತ್ತು ದಿನೇಶ್ ಹೇಳಿಕೊಂಡರು. ಶೋಭಾ ಕರಂದ್ಲಾಜೆ ಮತ್ತು ಸಿ.ಟಿ.ರವಿ ಅವರಿಂದ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಎಸ್.ಎಲ್.ಧಮೇಗೌಡ, ಗಾಯತ್ರಿ ಶಾಂತೇಗೌಡ ಅವರು ಸಮುದಾಯ ಭವನ, ಹಾಸ್ಟೆಲ್ ಕಟ್ಟಡ-ಹೀಗೆ ಹಲವು ಅಭಿವೃದ್ಧಿ ಮಾಡಿದ್ದಾರೆ. ಈ ಕಾರಣಕ್ಕೆ ನಾವು ಜೆಡಿಎಸ್ ಬೆಂಬಲಿಸಿದ್ದೇವೆ ಎಂದು ಜೆಡಿಎಸ್ ಬೆಂಬಲಿತ ಉಮೇಶ್ ಹೇಳಿಕೊಂಡರು.

Leave a Reply

Your email address will not be published. Required fields are marked *