ಮತದಾರ ಪಟ್ಟಿಯಲ್ಲಿ ಸನ್ನಿ ಲಿಯೋನ್​, ಆನೆ, ಪಾರಿವಾಳದ ಫೋಟೋ

ಲಖನೌ: 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದೆ. ವಿಚಿತ್ರವೆಂದರೆ ಉತ್ತರ ಪ್ರದೇಶದಲ್ಲಿ ಪರಿಷ್ಕರಣೆಗೊಳ್ಳುತ್ತಿರುವ ಮತದಾರರ ಪಟ್ಟಿಯಲ್ಲಿ ಸನ್ನಿ ಲಿಯೋನ್​, ಆನೆ, ಪಾರಿವಾಳ, ಜಿಂಕೆಗಳು ಫೋಟೋಗಳು ಕಾಣಿಸಿಕೊಂಡಿದ್ದು, ಕುತೂಹಲ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಪ್ರಾಣಿಗಳ ಚಿತ್ರ ಇರುವ 2 ಪೇಜ್​ ಈಗ ಬಹಿರಂಗಗೊಂಡಿದೆ. ಅದರಲ್ಲಿ 51 ವರ್ಷದ ಮಹಿಳೆಯ ಹೆಸರಿನ ಮುಂದೆ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಫೋಟೋ ಇದ್ದರೆ, 56 ವರ್ಷದ ವ್ಯಕ್ತಿಯ ಹೆಸರಿನ ಮುಂದೆ ಆನೆಯ ಚಿತ್ರ ಹಾಕಲಾಗಿದೆ.

ಪ್ರಾಣಿಗಳ ಚಿತ್ರ ಇರುವ ಮತದಾರರ ಪಟ್ಟಿ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತಿರುವ ಅಧಿಕಾರಿಗಳು ಘಟನೆ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಇತ್ತೀಚೆಗೆ ನಗರದಿಂದ ಗ್ರಾಮೀಣ ಭಾಗಕ್ಕೆ ವರ್ಗಾವಣೆಗೊಂಡಿದ್ದ ಡೇಟಾ ಎಂಟ್ರಿ ಆಪರೇಟರ್​ ಮತದಾರರ ಪಟ್ಟಿಯಲ್ಲಿ ಪ್ರಾಣಿಗಳ ಮತ್ತು ಚಿತ್ರ ನಟಿಯ ಫೋಟೋಗಳನ್ನು ಸೇರಿಸಿದ್ದಾನೆ. ಈತ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿರುವ ಮಾಹಿತಿಯನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)