ಶಿವಮೊಗ್ಗ: ಭಾರತ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಸಹ ಗಗನ ಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದ ಹಿನ್ನೆಲೆಯಲ್ಲಿ ಎಲ್‌ಬಿಎಸ್ ನಗರದ ಆರ್ಯ ವಿಜ್ಞಾನ ಪಿಯು ಕಾಲೇಜಿನಲ್ಲಿ ಬುಧವಾರ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಗುಜರಾತ್ ಮೂಲದ ಸುನೀತಾ ವಿಲಿಯಮ್ಸ್, ಎಂಟು ದಿನಗಳ ಅವಧಿಗೆ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ 285 ದಿನಗಳನ್ನು ಅಲ್ಲಿಯೇ ಇರಬೇಕಾಯಿತು. ಈಗ ಸವಾಲನ್ನು ಜಯಸಿ ಭೂಮಿಗೆ ಮರಳಿದ್ದಾರೆ. ನಮ್ಮ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಸುನಿತಾ ವಿಲಿಯಮ್ಸ್ ಸಾಧನೆ ಮಾದರಿಯಾಗಿದೆ ಎಂದು ಹೇಳಿದರು.
ವೈಜ್ಞಾನಿಕ ಚಿಂತಕ ಡಾ. ಶೇಖರ್ ಗೌಳೇರ್ ಮಾತನಾಡಿ, ಸುನಿತಾ ವಿಲಿಯಮ್ಸ್ ಮತ್ತವರ ತಂಡದ ಆಗಮನ ಇಡೀ ಪ್ರಪಂಚಕ್ಕೆ ಸಂಭ್ರಮ ತಂದಿದೆ. ವಿಶ್ವದಲ್ಲಿ ಸ್ಪೇಸ್ ವಾಕ್ ಮಾಡಿದವರ ಪೈಕಿ ಸುನೀತಾ ನಾಲ್ಕನೇಯವರು. 60ರ ಅಂಚಿನಲ್ಲಿರುವ ಅವರು ಅಂತರಿಕ್ಷ ಪ್ರಯಾಣ ಮಾಡಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು 285 ದಿನಗಳ ಕಾಲ ಬದುಕಿ ಬಂದಿದ್ದು ಸಾಧನೆಯೇ ಸರಿ ಎಂದರು.
ಶಿವಮೊಗ್ಗ ಬಿಇಒ ರಮೇಶ್ ಮಾತನಾಡಿ, ಸುನಿತಾ ವಿಲಿಯಮ್ಸ್ ಮಾಡಿರುವ ಸಾಧನೆಗೆ ಆರ್ಯ ವಿಜ್ಞಾನ ಕೇಂದ್ರದ ಮಕ್ಕಳು ಸಂಭ್ರಮಿಸುತ್ತಿರುವುದು ಸಮಯೋಚಿತ. ಈ ಕಾಲೇಜಿನ ವಿದ್ಯಾರ್ಥಿಗಳೂ ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡಲಿ. ಅದಕ್ಕೆ ಸುನಿತಾ ಬದುಕು ಪ್ರೇರಣೆಯಾಗಲಿ ಎಂದು ಆಶಿಸಿದರು.
