ಹಳಿಯಾಳ: ಕಬ್ಬು ಬೆಳೆಗಾರ ರೈತರಿಗೆ ಮೋಸವಾಗದ ರೀತಿಯಲ್ಲಿ ಹಾಗೂ ಕಬ್ಬಿಗೆ ಉತ್ತಮ ಬೆಲೆ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕಾದ ಶಾಸಕ ಆರ್.ವಿ. ದೇಶಪಾಂಡೆ ರೈತರ ಹಾಗೂ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ನಡುವೆ ಗೊಂದಲ ನಿರ್ಮಾಣ ಮಾಡುವ ಹೇಳಿಕೆ ನೀಡಿದ್ದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರ ಸಂಕಷ್ಟ ಅರಿತು ಬೆಳೆ ಹಾನಿ ಪರಿಹಾರವನ್ನು ಸರ್ಕಾರದಿಂದ ಕೊಡಿಸಬೇಕಾದ ಶಾಸಕರು ಯಾವುದೇ ಪ್ರಯತ್ನ ಮಾಡದಿರುವುದು ಹಾಗೂ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದಿರುವುದು ರೈತ ಸಮುದಾಯಕ್ಕೆ ದೌರ್ಭಾಗ್ಯದ ಸಂಗತಿಯಾಗಿದೆ ಎಂದಿದ್ದಾರೆ.
ಪಟ್ಟಣದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಹಾಗೂ ಶಾಸಕ ದೇಶಪಾಂಡೆ ಅವರು ಮಾನವೀಯ ದೃಷ್ಟಿಯಿಂದ ರೈತರ ಸಹಾಯಕ್ಕೆ ಬರುವುದು ಅವರ ಕರ್ತವ್ಯವಾಗಿದೆ. ಆದರೆ, ಇಲ್ಲಿ ಶಾಸಕರು ರೈತರ ನ್ಯಾಯಯುತ ಬೇಡಿಕೆಗಳು ಹಾಗೂ ರೈತರಿಗೆ ಕಾರ್ಖಾನೆಯಿಂದ ಪಾವತಿ ಆಗಬೇಕಾದ ಹಣದ ಬಗ್ಗೆ ಚಕಾರವೆತ್ತದಿರುವುದು ಅವರ ಕಾರ್ಖಾನೆ ಪರ ಒಲವನ್ನು ತೋರಿಸುತ್ತದೆ.
ಸಕ್ಕರೆ ಕಾರ್ಖಾನೆಯವರು ರೈತರ ಸಂಕಷ್ಟದಲ್ಲಿ ಮೊಂಡುತನ ಪ್ರದರ್ಶಿಸದೆ ಜಿಲ್ಲಾಧಿಕಾರಿಯ ಸಭೆಯಲ್ಲಿ ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ರಾಜಕಾರಣಿಗಳು ಪಕ್ಷ ಭೇದ ಮರೆತು ರೈತರ ಪರವಾಗಿ ನಿಲ್ಲಬೇಕು. ರೈತರಿಗೆ ಸಹಾಯ ಮಾಡಬೇಕು ಹಾಗೆಯೇ ಸಕ್ಕರೆ ಕಾರ್ಖಾನೆಯವರು ಶಾಂತ ರೀತಿಯಲ್ಲಿ ಸಮಸ್ಯೆ ಬಗೆಹರಿಸಿ ಕಾರ್ಖಾನೆಯನ್ನು ಮುಂದಿನ ದಿನಗಳಲ್ಲಿ ಆರಂಭಿಸಬೇಕು ಎಂದು ಸುನೀಲ ಹೆಗಡೆ ಒತ್ತಾಯಿಸಿದರು.