ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಿಂದ ಪಕ್ಷೇತರನಾಗಿ ಸ್ಪರ್ಧಿಸಲು ಬಿಜೆಪಿಯ ಸಚಿವರು ಹಾಗೂ ಕೆಲ ಶಾಸಕರು ತನಿ-ಮನ-ಧನ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದರು.
ಬಿಜೆಪಿಯಿಂದ ಮುಖ್ಯಮಂತ್ರಿ ರೇಸ್ನಲ್ಲಿರುವ ಕೆಲ ಪ್ರಭಾವಿಗಳು ಈ ಬಾರಿಯ ಚುನಾವಣೆಯಲ್ಲಿ ನನಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನನ್ನ ನಕಲಿ ಸ್ಪರ್ಧೆ ಹಿಂದುತ್ವ ಹಾಗೂ ಭ್ರಷ್ಟಾಚಾರದ ವಿರುದ್ಧ. ಹೀಗಾಗಿ ಈ ಬಾರಿ ಕಾರ್ಕಳದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದರು.
ಇದೀಗ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಸಚಿವ ಸುನಿಲ್ ಕುಮಾರ್ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ಪ್ರಿಯ ಮುತಾಲಿಕ್ ಜೀ, ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ನನಗೆ ಮೊದಲೇ ಅನುಮಾನವಿತ್ತು. ಅದೀಗ ನಿಜವಾಗಿದೆ. ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.
ಪ್ರಿಯ ಮುತಾಲಿಕ್ ಜೀ, ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ನಮಗೆ ಮೊದಲೇ ಅನುಮಾನವಿತ್ತು. ಅದೀಗ ನಿಜವಾಗಿದೆ !
— Sunil Kumar Karkala (@karkalasunil) February 13, 2023
ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. (1/3)
ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆ ಮಾಡುತ್ತಿರುವುದನ್ನು ಸಚಿವ ಸುನಿಲ್ ಕುಮಾರ್ ಕಾರ್ಕಳ ಈ ಮೊದಲೇ ಸ್ವಾಗತಿಸಿದ್ದರು. ಇದೀಗ ಟ್ವೀಟ್ ಮೂಲಕ ಮುತಾಲಿಕ್ಗೆ ತನು ಮನ ಧನ ಸಹಾಯ ಮಾಡುವವರು ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ ಎಂದು ಸವಾಲೆಸೆದಿದ್ದಾರೆ.
ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧಿಸುತ್ತಿರುವ ಉದ್ದೇಶ ಏನು ಎಂಬುದನ್ನು ಕೆಲ ದಿನಗಳ ಹಿಂದೆ ” ವೋಟು, ನೋಟು” ಹೇಳಿಕೆಯ ಮೂಲಕ ತಿಳಿಸಿದ್ದರು. ಈಗ ತನುಮನಧನ ಸಹಾಯವಿದೆ ಎಂದು ಹೇಳುತ್ತಿದ್ದು, ಒಟ್ಟಾರೆಯಾಗಿ ಚುನಾವಣಾ ಸ್ಪರ್ಧೆಯ ಉದ್ದೇಶ ಕಾರ್ಕಳದ ಹಿತವಲ್ಲ, ಹಿಂದುತ್ವದ ಹಿತವಲ್ಲ, ಜನತೆಯ ಹಿತವೂ ಅಲ್ಲ. ಅದು ” ತನು- ಮನ-ಧನ” ನೋಟಿಗಾಗಿ ಎಂಬುದು ಸ್ಪಷ್ಟವಾಗಿದೆ ಎಂದು ಹೇಳುವ ಮೂಲಕ ಸಚಿವ ಸುನಿಲ್ ಕುಮಾರ್ ಕಾರ್ಕಳ ತಿರುಗೇಟು ನೀಡಿದ್ದಾರೆ.