ಕಪಿಲ್​ ದೇವ್ ಐಪಿಎಲ್​ನಲ್ಲಿ​ 25 ಕೋಟಿ ರೂ.ಗೆ ಬಿಕರಿಯಾಗುತ್ತಿದ್ದರು: ಸುನಿಲ್​ ಗವಾಸ್ಕರ್​

ಜೈಪುರ: ಭಾರತ ಕ್ರಿಕೆಟ್​ ಕಂಡ ಅತ್ಯುತ್ತಮ ಆಲ್​ರೌಂಡರ್​ಗಳ ಪೈಕಿ ಅಗ್ರಸ್ಥಾನದಲ್ಲಿರುವ ಹಿರಿಯ ಕ್ರಿಕೆಟಿಗ ಕಪಿಲ್​ ದೇವ್​ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಆಟವಾಡುತ್ತಿದ್ದರೆ 12ನೇ ಆವೃತ್ತಿಯ ಐಪಿಎಲ್​ ಹರಾಜಿನಲ್ಲಿ 25 ಕೋಟಿ ರೂ.ಗೆ ಬಿಕರಿಯಾಗುತ್ತಿದ್ದರು ಎಂದು ಹಿರಿಯ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಅಭಿಪ್ರಾಯ ಪಟ್ಟಿದ್ದಾರೆ.

ಜೈಪುರದಲ್ಲಿ ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಪಿಲ್​ ದೇವ್​ ಮತ್ತು ಸುನಿಲ್​ ಗವಾಸ್ಕರ್​ ಪಾಲ್ಗೊಂಡಿದ್ದರು. ಹರಾಜು ಪ್ರಕ್ರಿಯೆ ಮುಗಿದ ನಂತರ ಮಾತನಾಡಿದ ಅವರು, ಕಪಿಲ್​ ದೇವ್​ ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರೆ 25 ಕೋಟಿ ರೂ. ಗೆ ಬಿಕರಿಯಾಗುತ್ತಿದ್ದರು. ಕಪಿಲ್​ ದೇವ್​ 1983ರ ವಿಶ್ವಕಪ್​ನಲ್ಲಿ ಜಿಂಬಾಂಬ್ವೆ ವಿರುದ್ಧ ಏಕಾಂಗಿ ಹೋರಾಟ ನಡೆಸಿ ಅಜೇಯ 175 ರನ್​ ಗಳಿಸಿದ್ದರು. ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ದಾಖಲಾಗಿರುವ ಶ್ರೇಷ್ಠ ಇನಿಂಗ್ಸ್​ಗಳಲ್ಲಿ ಈ ಇನಿಂಗ್ಸ್​ ಸ್ಥಾನ ಪಡೆದಿದೆ ಎಂದು ಗವಾಸ್ಕರ್​ ತಿಳಿಸಿದರು.

ಭಾರತ ತಂಡ 17 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು. ಈ ಹಂತದಲ್ಲಿ ಭಾರತ 70 ರಿಂದ 80 ರನ್​ ಗಳಿಸುವುದು ಕಷ್ಟವಾಗಿತ್ತು. ಆದರೆ ಕಪಿಲ್​ದೇವ್​ ಅವರು ಏಕಾಂಗಿ ಹೋರಾಟ ನಡೆಸಿ 138 ಎಸೆತಗಳಲ್ಲಿ 175 ರನ್​ ಸಿಡಿಸಿದ್ದರು. ಅವರು ಸಿಕ್ಸರ್​ ಸಿಡಿಸುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ. ಅವರು ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಸ್ಥಾನ ಪಡೆದಿದ್ದಾರೆ. ಇಂದು ಐಪಿಎಲ್​ ಫ್ರಾಂಚೈಸಿಗಳು ಆಲ್​ರೌಂಡರ್​ಗಳಿಗೆ ಹೆಚ್ಚಿನ ಮಣೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಪಿಲ್​ ಈ ಕಾಲಘಟ್ಟದಲ್ಲಿ ಆಟವಾಡುತ್ತಿದ್ದರೆ ಅತ್ಯಂತ ಹೆಚ್ಚಿನ ಬೆಲೆಗೆ ಅವರನ್ನು ಖರೀದಿಸಲಾಗುತ್ತಿತ್ತು ಎಂದು ಗವಾಸ್ಕರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)