ತುರ್ತು ನಿರ್ಗಮನ ಸುನೀಲ್ ಆಗಮನ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬರೋಬ್ಬರಿ 8 ವರ್ಷಗಳ ಬಳಿಕ ನಟ ಸುನೀಲ್ ರಾವ್ ಪುನಃ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. 2010ರಲ್ಲಿ ತೆರೆಕಂಡ ‘ಪ್ರೇಮಿಸಂ’ ಚಿತ್ರದಲ್ಲಿ ನಟಿಸಿದ್ದ ಅವರು ಆನಂತರ ಬಣ್ಣದ ಲೋಕದಲ್ಲಿ ಅಷ್ಟೇನೂ ಕಾಣಿಸಿಕೊಂಡಿರಲಿಲ್ಲ. ‘ಲೂಸ್ ಕನೆಕ್ಷನ್’ ವೆಬ್ ಸೀರಿಸ್​ನಲ್ಲಿ ನಟಿಸಿದ ಮೇಲೆ ಇದೀಗ ‘ತುರ್ತ ನಿರ್ಗಮನ’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿದ್ದಾರೆ. 8 ವರ್ಷಗಳ ನಂತರ ಅವರು ಎಂಥ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ? ‘ಜೀವನದಲ್ಲಿ ಏನೋ ದೊಡ್ಡದನ್ನೇ ಸಾಧಿಸುತ್ತೇನೆ ಎಂಬ ಉದ್ದೇಶ ಇಟ್ಟುಕೊಂಡಿರುವ ಪಾತ್ರ ಅವರದ್ದು. 32 ವರ್ಷದ ವ್ಯಕ್ತಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ’ ಎಂದು ಸುನೀಲ್ ಪಾತ್ರದ ಬಗ್ಗೆ ಮಾಹಿತಿ ಬಿಚ್ಚಿಡುತ್ತಾರೆ ನಿರ್ದೇಶಕ ಹೇಮಂತ್ ಕುಮಾರ್.

ಬಹುತೇಕ ಚಿತ್ರೀಕರಣ ಮುಗಿಸಿರುವ ‘ತುರ್ತ ನಿರ್ಗಮನ’ ಚಿತ್ರದಲ್ಲಿ ಸುನೀಲ್ ಜತೆಗೆ ಇನ್ನೂ ಅನೇಕ ಕಲಾವಿದರಿದ್ದಾರೆ. ಅದರಲ್ಲಿ ಸುನೀಲ್ ಪಾತ್ರವೇ ಪ್ರಮುಖವಾಗಿರಲಿದೆಯಂತೆ. ‘ಬದುಕಿನಲ್ಲಿ ಏನು ಮಾಡಬೇಕು ಎಂಬ ಗೊಂದಲ, ತನಗೆ ಎಲ್ಲವೂ ತಿಳಿದಿದೆ ಎಂಬ ಅಹಂ ಆ ಪಾತ್ರಕ್ಕಿರುತ್ತದೆ. ಬಂದ ಅವಕಾಶಗಳನ್ನು ರಿಜೆಕ್ಟ್ ಮಾಡುತ್ತ, ಇನ್ನೂ ದೊಡ್ಡ ಅವಕಾಶ ಸಿಗಲಿದೆ ಎಂಬ ಭ್ರಮೆಯಲ್ಲಿರುವ ಪಾತ್ರ ಅದು. ಆದರೆ, ಅಂತಹ ವ್ಯಕ್ತಿಯನ್ನು ಸಮಾಜ ಹೇಗೆ ನೋಡುತ್ತದೆ, ಇವರೆಲ್ಲ ಬದುಕಿನಲ್ಲಿ ಯಾವ ರೀತಿ ಬದುಕುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಹೇಮಂತ್. ಬಹಳ ದಿನಗಳ ನಂತರ ಸಿನಿಮಾ ಒಪ್ಪಿಕೊಂಡಿರುವ ಸುನೀಲ್, ಆರಂಭದಲ್ಲಿ ಈ ತಂಡವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲವಂತೆ. ಆದರೆ, ಕಥೆ ಕೇಳಿದ ಮೇಲೆ ‘ತುರ್ತ ನಿರ್ಗಮನ’ದ ಮೇಲೆ ಅವರಿಗೆ ಭರವಸೆ ಬಂದಿದೆ. ‘ಆ ಪಾತ್ರ ಹೇಗೆ ಮೂಡಿಬರಬೇಕು ಎಂದುಕೊಂಡಿದ್ದೇನೋ, ಅದಕ್ಕಿಂತಲೂ ಜಾಸ್ತಿ ಉತ್ತಮವಾಗಿಸಿದ್ದಾರೆ ಸುನೀಲ್. ಅವರೊಬ್ಬ ಪ್ರತಿಭಾವಂತ ನಟ. ಕಲಾವಿದ ಯಾರು ಎಂಬುದಕ್ಕಿಂತ, ಪಾತ್ರಕ್ಕೆ ಯಾವ ಮಟ್ಟದಲ್ಲಿ ಜೀವ ತುಂಬುತ್ತಾರೆ ಎಂಬುದು ಮುಖ್ಯವಾಗುತ್ತದೆ.

ಸುನೀಲ್ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದು ಹೊಗಳುತ್ತಾರೆ ನಿರ್ದೇಶಕರು.

ಇನ್ನು, ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಸಂಯುಕ್ತಾ ಹೆಗಡೆ ಮುಂತಾದವರು ನಟಿಸಿದ್ದಾರೆ. 4-5 ದಿನಗಳಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುವುದು ನಿರ್ದೇಶಕರ ಉದ್ದೇಶ. ಆಗಸ್ಟ್​ನಲ್ಲಿ ಸಿನಿಮಾ ರಿಲೀಸ್ ಮಾಡುವ ಗುರಿ ಇರಿಸಿಕೊಂಡಿದೆ ಚಿತ್ರತಂಡ. ಮಲಯಾಳಂನ ಖ್ಯಾತ ಸಂಕಲನಕಾರ ಬಿ. ಅಜಿತ್​ಕುಮಾರ್ ಈ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ. ಛಾಯಾಗ್ರಹಣ ಹೊಣೆ ಪ್ರಯಾಗ್ ಮುಕುಂದನ್ ಅವರದು. ಕುಮಾರ್ ಆಂಡ್ ಕುಮಾರ್ ಫಿಲ್ಸ್್ಮ ಸಂಸ್ಥೆಯಡಿ ಈ ಚಿತ್ರ ನಿರ್ವಣವಾಗಿದೆ.

Leave a Reply

Your email address will not be published. Required fields are marked *