ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್‌ಗೆ ಜಾಮೀನು ಮಂಜೂರು

ನವದೆಹಲಿ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಇಂದು ಕೋರ್ಟ್‌ಗೆ ಹಾಜರಾದ ಶಶಿ ತರೂರ್‌ ಅವರಿಗೆ ನ್ಯಾಯಾಲಯ ಒಂದು ಲಕ್ಷ ರೂ. ಬಾಂಡ್‌ ಮೇಲೆ ನಿರೀಕ್ಷಿತ ಜಾಮೀನಿನಿಂದ ಸಾಮಾನ್ಯ ಜಾಮೀನಿಗೆ ಪರಿವರ್ತಿಸಿ ಜಾಮೀನು ನೀಡಿದೆ.

ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಧೀಶರು, ಸೆಷನ್ಸ್‌ ನ್ಯಾಯಾಲಯ ಈಗಾಗಲೇ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದ್ದು, ಔಪಚಾರಿಕ ಜಾಮೀನು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಸುನಂದಾ ಪುಷ್ಕರ್‌ ಸಾವು ಪ್ರಕರಣದಲ್ಲಿ ಶಶಿ ತರೂರ್‌ ಅವರ ಕೈವಾಡ ಇದೆ ಎಂದು ವಿಶೇಷ ತನಿಖಾ ದಳ ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿಯ ಆಧಾರದ ಮೇಲೆ ಈ ಹಿಂದೆ ನ್ಯಾಯಾಲಯ ಶಶಿ ತರೂರ್ ಅವರಿಗೆ ಜೂನ್‌ 5ರಂದು ಸಮನ್ಸ್ ಜಾರಿ ಮಾಡಿತ್ತು.

ಜುಲೈ 5ರಂದು ದೆಹಲಿಯ ಪಟಿಯಾಲ ನ್ಯಾಯಾಲಯ ತರೂರ್‌ ಅವರಿಂದ ಒಂದು ಲಕ್ಷ ರೂಪಾಯಿ ಬಾಂಡ್‌ನ್ನು ಪಡೆದು ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿತ್ತು. (ಏಜೆನ್ಸೀಸ್)