ಬಿಸಿಲ ಆಘಾತಕ್ಕೆ ಮೂವರು ಬಲಿ

ಕಾಸರಗೋಡು: ಕೇರಳದಲ್ಲಿ ಈ ಬಾರಿ ಬಿಸಿಲಿನ ಆಘಾತದಿಂದ ಮೂವರು ಸಾವಿಗೀಡಾಗಿದ್ದು, 111 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಣ್ಣೂರು ವೆಳ್ಳಾರಚೆಕ್ಕಿ ನಿವಾಸಿ ನಾರಾಯಣನ್(67), ಪತ್ತನಾಂತಿಟ್ಟ ಕೋಳಾಂಜೇರಿ ನಿವಾಸಿ ಶಾಜಹಾನ್(55) ಹಾಗೂ ತಿರುವನಂತಪುರ ನೈಯಾಟಿಂಗರ ನಿವಾಸಿ ಕರುಣಾಕರನ್(43) ಮೃತಪಟ್ಟವರು. ಕುಂಬಳೆಯಲ್ಲಿ ಮೂರು ವರ್ಷದ ಬಾಲಕಿಗೆ ಬಿಸಿಲ ಆಘಾತದಿಂದ ಸುಟ್ಟಗಾಯಗಳುಂಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಜಾಗೃತೆ ಪಾಲಿಸಲು ಸೂಚನೆ: ಇನ್ನೂ ನಾಲ್ಕು ದಿನ ದಿನದ ತಾಪಮಾನ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಯಿದ್ದು, ಜಾಗ್ರತೆ ಪಾಲಿಸುವಂತೆ ಸರ್ಕಾರ ಸೂಚಿಸಿದೆ. ರಾಜ್ಯ ವಿಪತ್ತು ನಿವಾರಣಾ ವಿಭಾಗ ಎಚ್ಚರಿಕೆ ನೀಡಿದೆ.

ಆಲಪ್ಪುಳ, ಕೊಟ್ಟಾಯಂ, ಪಾಲಕ್ಕಾಡ್, ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಗದಿಗಿಂತ 4 ಡಿಗ್ರಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಂಚರಿಸುವ ಮಧ್ಯೆ, ಭೂಮಧ್ಯ ರೇಖೆ ಮೇಲಿಂದ ಚಲಿಸುತ್ತಿದೆ. ಮೋಡ ಕೊರತೆಯಿಂದ ಸೂರ್ಯಪ್ರಕಾಶ ನೇರವಾಗಿ ಭೂಮಿಗೆ ಬೀಳುತ್ತಿರುವುದು ತಾಪಮಾನ ಹೆಚ್ಚಾಗಲು ಕಾರಣ ಎಂಬುದು ಹವಾಮಾನ ಇಲಾಖೆ ಲೆಕ್ಕಾಚಾರ.

ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ: ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಕಾರ್ಮಿಕರು ಬಿಸಿಲಿಗೆ ಮೈಯೊಡ್ಡಿ ಕೆಲಸ ನಿರ್ವಹಿಸದಂತೆ ಕಾರ್ಮಿಕ ಅಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಯಥೇಚ್ಛ ದ್ರವಾಹಾರ ಸೇವಿಸುವುದು, ಹಗಲು ಹೊತ್ತಿನಲ್ಲಿ ಬಿಸಿ ಪಾನೀಯ ವರ್ಜಿಸುವುದು, ಹತ್ತಿ ಬಟ್ಟೆ ಧರಿಸುವುದು, ಮಕ್ಕಳು, ರೋಗಿಗಳು, ಗರ್ಭಿಣಿಯರು, ವೃದ್ಧರ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.