More

  ಬೇಸಿಗೆ ಬರುತ್ತಿದೆ ಕಾಡುವ ಉರಿ, ಬೆವರನ್ನೂ ತರುತ್ತಿದೆ

  ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳೆಂದರೆ ಅತಿಯಾದ ಬೆವರು ಮತ್ತು ಉರಿ. ಇಂದು ಈ ಎರಡು ತೊಂದರೆಗಳ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ.

  Dhanvanthari- Dr Venkataramana Hegadeಅತಿಯಾಗಿ ಬೆವರು ಬರಲು ಹಲವು ರೀತಿಯ ಕಾರಣಗಳಿರುತ್ತವೆ. ಆದರೆ ಬೇಸಿಗೆಯಲ್ಲಿ ಬೇರೆ ಕಾರಣಗಳ ಜೊತೆಗೆ ಉಷ್ಣತೆಯೂ ಸೇರಿ ಬೆವರುವಿಕೆ ಹೆಚ್ಚುತ್ತದೆ. ಅತಿಯಾಗಿ ಉಪ್ಪು, ಹುಳಿ, ಖಾರಗಳ ಸೇವನೆಯಿಂದ ಬೆವರಿನ ಪ್ರಮಾಣ ಹೆಚ್ಚುತ್ತದೆ; ಜೊತೆಗೆ ಕೆಟ್ಟ ವಾಸನೆಯೂ ಇರಲು ಕಾರಣವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಪ್ರಾಕೃತಿಕವಾಗಿ ಸಿಹಿಯಾಗಿರುವ ಪದಾರ್ಥಗಳು ಅಂದರೆ ಎಳನೀರು, ಹಣ್ಣುಗಳು, ಹಾಲು, ತುಪ್ಪ ಮುಂತಾದವು ಮತ್ತು ಕಹಿ ಹಾಗೂ ಒಗರು ರುಚಿ ಹೊಂದಿರುವ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಹಸಿರು ಸೊಪ್ಪುಗಳು ಕೂಡಾ ಸೂಕ್ತವಾದವು. ಮಾನಸಿಕ ಒತ್ತಡ, ಭಯ, ಉದ್ವೇಗಗಳೂ ಅತಿಯಾದ ಬೆವರಿಗೆ ಕಾರಣವಾಗಬಲ್ಲವು. ಹಾಗಾಗಿ ಅವುಗಳಿಂದ ದೂರವಿರಲು ಸಾಧ್ಯವಾದಷ್ಟೂ ಪ್ರಯತ್ನಿಸಬೇಕು.

  ಏನೇನು ಮಾಡಬಹುದು?: 10 ಗ್ರಾಂನಷ್ಟು ಕೊತ್ತಂಬರಿ ಬೀಜವನ್ನು ತೆಗೆದುಕೊಂಡು ಬಿಸಿನೀರಿನಲ್ಲಿ ರಾತ್ರಿ ಇಟ್ಟು ಬೆಳಿಗ್ಗೆ ಆ ನೀರನ್ನು ಸೇವಿಸುವುದರಿಂದ ಬಹಳಷ್ಟು ಜನರಲ್ಲಿ ಪರಿಣಾಮ ಕಂಡುಬರುತ್ತದೆ. ಲಾವಂಚ, ಸೊಗದೇ ಬೇರುಗಳ ಕಷಾಯವೂ ತುಂಬಾ ಸಹಾಯ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಿತ್ಯವೂ ಇವುಗಳ ಕಷಾಯ ಸೇವಿಸುವುದು ಒಳ್ಳೆಯದು. ಸೊಗದೇ ಬೇರಿನ ಸೇವನೆಯಿಂದ ಬೆವರಿನ ವಾಸನೆ ಕೂಡಾ ಕಡಿಮೆಯಾಗುತ್ತದೆ. ನಿತ್ಯವೂ ಯೋಗಾಸನ, ಭ್ರಾಮರಿ, ಶೀತಲೀ, ಶೀತ್ಕಾರಿಗಳಂತಹ ಪ್ರಾಣಾಯಾಮಗಳು ಮತ್ತು ಚಿನ್ಮುದ್ರೆ, ವರುಣ ಮುದ್ರೆಗಳಂತಹ ಮುದ್ರೆಗಳನ್ನು ಅಭ್ಯಾಸ ಮಾಡುವುದರಿಂದ ತುಂಬ ಸಹಾಯವಾಗುತ್ತದೆ. ಶುದ್ಧ ಶ್ರೀಗಂಧವನ್ನು ಕಾಲು ಚಮಚದಷ್ಟು ತೇಯ್ದು ಹಾಲಿಗೆ ಹಾಕಿ ನಿತ್ಯವೂ ಕುಡಿದರೆ ಬೇಸಿಗೆಯಲ್ಲಿ ಕಾಡುವ ಅತಿ ಬೆವರು, ಬೆವರಿನ ವಾಸನೆ ಮತ್ತು ಉರಿಗಳು ಕಡಿಮೆಯಾಗುತ್ತವೆ.

  ಉರಿಗೇನು ಕಾರಣ?: ಬೇಸಿಗೆ ಬಂತೆಂದರೆ ಕಣ್ಣುರಿ, ಗಂಟಲು ಹೊಟ್ಟೆಗಳಲ್ಲಿ ಉರಿ, ಪಾದ – ಹಸ್ತಗಳಲ್ಲಿ ಬಿಸಿ ಮತ್ತು ಉರಿಯಾಗಲು ಪ್ರಾರಂಭವಾಗುತ್ತದೆ ಎಂಬುದು ಬಹಳಷ್ಟು ಜನರ ಸಮಸ್ಯೆ. ಈ ಉರಿಗೆ ಕಾರಣ ನಮ್ಮ ದೇಹದಲ್ಲಿ ಆಗುವ ದೋಷಗಳ ಏರುಪೇರು. ಅವು ಆಗದಂತೆ ತಡೆದರೆ ಹೊರಗೆ ಎಷ್ಟೇ ತಾಪಮಾನವಿದ್ದರೂ ನಾವು ತಂಪಾಗಿರಲು ಸಾಧ್ಯ. ಅದಕ್ಕಾಗಿ ಈ ಕಾಲದಲ್ಲಿ ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅಂದರೆ ಹಾಲು, ಬೆಣ್ಣೆ, ಬಸಳೆಸೊಪ್ಪು, ಬೂದುಗುಂಬಳಕಾಯಿ, ಹಾಲುಗುಂಬಳಕಾಯಿ, ಒಂದೆಲಗ, ನೆಲ್ಲಿಕಾಯಿ, ಒಣದ್ರಾಕ್ಷಿ, ಮೆಂತೆಸೊಪ್ಪು, ಖರ್ಜೂರ, ಚಿಕ್ಕು (ಸಪೋಟ), ಸೀತಾಫಲ, ಖರಬೂಜದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಹೋದರೆ ಮೇಲೆ ಹೇಳಿದ ಉರಿಗಳೆಲ್ಲಾ ಕಡಿಮೆಯಾಗಲು ಸಹಾಯವಾಗುತ್ತದೆ.

  ಈ ರೀತಿ ಸಮಸ್ಯೆ ಇರುವವರು ಉಪ್ಪು, ಹುಳಿ, ಖಾರಗಳನ್ನು ಸಾಧ್ಯವಾದಷ್ಟೂ ಕಡಿಮೆ ಸೇವಿಸಬೇಕು. ವಿಶೇಷವಾಗಿ ಹಿರಿಯರಿಗೆ ಬೇಸಿಗೆಯಲ್ಲಿ ಉಷ್ಣವಾಗುವುದರ ಜೊತೆಗೆ ನಿಶ್ಶಕ್ತಿಯೂ ಕಾಡುತ್ತದೆ. ಹಾಗಾಗಿ, ಖರ್ಜೂರದ ಮಿಲ್ಕ್ ಶೇಕ್ ಮಾಡಿಕೊಂಡು ಅಂದರೆ ಮೆತ್ತನೆಯ, ಕಪ್ಪು ಬಣ್ಣದ ಖರ್ಜೂರಗಳ ಬೀಜ ತೆಗೆದು ಹಾಲಿನ ಜೊತೆ ರುಬ್ಬಿ ಹಸಿವಿರುವ ಸಮಯದಲ್ಲಿ ಅಂದರೆ ಮಧ್ಯಾಹ್ನ 12 ಘಂಟೆಯ ಹೊತ್ತಿಗೆ ಸೇವಿಸಿದರೆ ತುಂಬಾ ಅನುಕೂಲ ವಾಗುತ್ತದೆ ಬೂದುಗುಂಬಳಕಾಯಿಯಂತೂ ಈ ಕಾಲದಲ್ಲಿ ಅತ್ಯಂತ ಪ್ರಶಸ್ತವಾದ ಆಹಾರದ್ರವ್ಯ. ಏಕೆಂದರೆ ಬೂದುಗುಂಬಳಕಾಯಿಯು ತಂಪುಗುಣವನ್ನು ಹೊಂದಿದ್ದು ನಿಶ್ಶಕ್ತಿ, ದೇಹದಲ್ಲಿ ಉರಿ, ಮಾನಸಿಕ ಒತ್ತಡ, ನಿದ್ರಾಹೀನತೆಗಳನ್ನು ಕಡಿಮೆ ಮಾಡಲು ಅತ್ಯಂತ ಸಹಾಯಕ. ಹಾಗಾಗಿ ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳದ ಜ್ಯೂಸ್ ಸೇವಿಸಿದರೆ ಅನುಕೂಲವಾಗುತ್ತದೆ. ಪಾದದ ಉರಿ, ನಿದ್ರಾಹೀನತೆಗಳಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ತುಪ್ಪ ಅಥವಾ ಕೊಬ್ಬರಿ ಎಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಿಕೊಂಡು ಮಲಗಿದರೆ ಈ ಸಮಸ್ಯೆಗಳು ಹತೋಟಿಗೆ ಬರುತ್ತವೆ.

  (ಪ್ರತಿಕ್ರಿಯಿಸಿ: [email protected])

  ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts