ಕಿಕ್ಕೇರಿ : ವರ್ಷಪೂರ್ತಿ ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿ ಬೇಸರ ಕಳೆಯಲು ಬೇಸಿಗೆ ಶಿಬಿರ ಸಹಕಾರಿಯಾಗಿವೆ ಎಂದು ಚೌಡೇನಹಳ್ಳಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ಶಂಭುಗೌಡ ತಿಳಿಸಿದರು.
ಹೋಬಳಿಯ ಚೌಡೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚೌಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ, ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಿಂದ ಶುಕ್ರವಾರ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ವತಿಯಿಂದ ಆಯೋಜಿಸುತ್ತಿರುವ ಶಿಬಿರಗಳು ಬಡಮಕ್ಕಳ ಗ್ರಾಮೀಣ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ನವಚೈತನ್ಯ ಮೂಡಿಸಲಿದೆ. ಮಕ್ಕಳ ಸಂಸ್ಕೃತಿ ಜೀವನ ಶೈಲಿ, ಸಾಮಾಜಿಕ ಕಳಕಳಿ, ಸುತ್ತಮುತ್ತಲ ಪರಿಸರ ಉಳಿವು, ಸ್ಥಳೀಯ ಇತಿಹಾಸಗಳ ಅರಿವು, ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದರು.
ಚೌಡೇನಹಳ್ಳಿ ಗ್ರಾಪಂ ಪಿಡಿಒ ನಟರಾಜಮೂರ್ತಿ ಮಾತನಾಡಿ, ಮಕ್ಕಳಲ್ಲಿ ಓದುವ ಕಲಾತ್ಮಕ ಚಟುವಟಿಕೆ, ದೇಶಿ ಕ್ರೀಡೆಗಳ ಕುರಿತು ಪರಿಚಯ ಮಾಡುವ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಮೇಶ್ ಮಾತನಾಡಿ, ಸರ್ಕಾರ ಉತ್ತಮವಾದ ಚಟುವಟಿಕೆಯನ್ನು ಮಕ್ಕಳಿಗೆ ಏರ್ಪಡಿಸಿದೆ. ಬಹುತೇಕ ಮೊಬೈಲ್, ಟಿವಿಗಳಿಂದ ದೂರವಿರಲು ಬಲು ಸಹಕಾರಿಯಾಗಿದೆ ಎಂದು ನುಡಿದರು.
ಗ್ರಾಪಂ ಉಪಾಧ್ಯಕ್ಷೆ ವಿನೋದ ಹರೀಶ್, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಶಿಕ್ಷಕರಾದ ಶಿವನಂಜೇಗೌಡ, ಶ್ರುತಿ ಮತ್ತಿತರರಿದ್ದರು.
