ಸರ್ಕಾರಿ ಶಾಲೆ ಮಕ್ಕಳಿಗೆ ಬೇಸಿಗೆ ಸಂಭ್ರಮ

>

ಪ್ರಕಾಶ್ ಮಂಜೇಶ್ವರ ಮಂಗಳೂರು
ಸರ್ಕಾರಿ ಶಾಲೆಯ ಮಕ್ಕಳು ಈಗ ಯಾವುದೇ ಶುಲ್ಕವಿಲ್ಲದೆ ಬೇಸಿಗೆ ರಜಾ ಅವಧಿಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಭಾಗವಹಿಸಬಹುದು. ಸ್ವಲ್ಪ ಓದು ಸ್ವಲ್ಪ ಮೋಜು ಎಂಬ ಪರಿಕಲ್ಪನೆಯಡಿ ಈ ಕಾರ‌್ಯಕ್ರಮ ನಡೆಯಲಿದೆ.
ಬರಪೀಡಿತ ತಾಲೂಕುಗಳ ಮಕ್ಕಳಿಗೆ ಶಾಲಾ ರಜಾ ಅವಧಿಯಲ್ಲೂ ಮಧ್ಯಾಹ್ನದೂಟ ಒದಗಿಸುವ ಉದ್ದೇಶದೊಂದಿಗೆ ‘ಬೇಸಿಗೆ ಸಂಭ್ರ ಮ’ ಯೋಜನೆ ರೂಪಿಸಲಾಗಿದೆ. ಶಾಲೆ ರಜೆಯ ಬಿಡುವಿನ ಅವಧಿಯ ನಿರ್ದಿಷ್ಟ ಸಮಯದಲ್ಲಿ ಮಕ್ಕಳನ್ನು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶವನ್ನು ಕೂಡ ಯೋಜನೆ ಹೊಂದಿದೆ.

ಯಾವಾಗ?: ದಕ್ಷಿಣ ಕನ್ನಡ, ಉಡುಪಿ ಸಹಿತ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಏ.22ರಿಂದ ಮೇ 25ರ ತನಕ ಹಾಗೂ 14 ಲೋಕಸಭಾ ಕ್ಷೇತ್ರವ್ಯಾಪ್ತಿಯ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಏ.24ರಿಂದ ಮೇ 28ರ ತನಕ ಬೇಸಿಗೆ ಸಂಭ್ರಮ ನಡೆಯಲಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಗುರುತಿಸಲಾದ ಶಾಲೆಗಳ ಪೈಕಿ 150ಕ್ಕಿಂತ ಅಧಿಕ ಮಕ್ಕಳಿರುವ ಪ್ರಾಥಮಿಕ/ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಯೋಜನೆ ಜಾರಿಯಾಗಲಿದೆ. ಈ ಶಾಲೆಯ ಆರು ಮತ್ತು ಏಳನೇ ತರಗತಿ ಮಕ್ಕಳು ಯೋಜನೆ ಫಲಾನುಭವಿಗಳಾಗಲು ಅರ್ಹರಾಗಿದ್ದಾರೆ.

ಏನಿದು ಸಂಭ್ರಮ?:  ಐದು ವಾರಗಳ ತರಬೇತಿಯನ್ನು ಐದು ಭಾಗವಾಗಿ ವಿಂಗಡಿಸಲಾಗಿದೆ. ಆರಂಭಿಕ ವಾರ ಕುಟುಂಬ, 2ನೇ ವಾರ ನೀರು, 3ನೇ ವಾರ ಆಹಾರ, ನಾಲ್ಕನೇ ವಾರ ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಕೊನೆಯ ವಾರ ಪರಿಸರ ಪಾಠ ಜರುಗಲಿದೆ. ಪ್ರತಿ ದಿನದ ಮೊದಲ ಅವಧಿ ಓದು ಬರಹ, ಎರಡನೇ ಅವಧಿ ನಿತ್ಯ ಜೀವನಕ್ಕೆ ಸಂಬಂಧಿಸಿ, ಮೂರನೇ ಅವಧಿ ಬಾ ಸಮಸ್ಯೆ ಬಿಡಿಸು, ನಾಲ್ಕನೇ ಅವಧಿ ಮಾಡಿ ಕಲಿ ಪ್ರಯೋಗ, ಕೊನೆಯ ಅವಧಿ ಕ್ವಿಕ್ ಮ್ಯಾಥ್ಸ್ ಎಂದು ವಿಂಗಡಿಸಲಾಗಿದೆ. ಪ್ರತಿ ವಾರದ ಆರನೇ ದಿನ ಮುಕ್ತ ದಿನ ಎಂದು ಗುರುತಿಸಲಾಗಿದ್ದು, ಇದರಲ್ಲಿ ಹಾಡು, ಆಟ, ಕಥೆ ಹೇಳುವುದು, ಭಾಷಣ, ನೃತ್ಯ ಪ್ರದರ್ಶನ, ಚಿತ್ರಕಲೆ, ನಾಟಕ ತರಬೇತಿ- ಮಾರ್ಗದರ್ಶನ ಒಳಗೊಂಡಿದೆ. ಶಾಲೆಗಳಲ್ಲಿ ಬೆಳಗ್ಗೆ 10 ರಿಂದ 12 ಗಂಟೆ ತನಕ ಶಿಬಿರದ ಕಾರ‌್ಯಕ್ರಮ ನಡೆಯಲಿದ್ದು, ಮಧ್ಯಾಹ್ನ ಬಿಸಿಯೂಟ ಬಳಿಕ ಮಕ್ಕಳು ಮನೆಗೆ ತೆರಳಬಹುದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ.22ರಿಂದ ‘ಬೇಸಿಗೆ ಸಂಭ್ರಮ’ ಶಿಬಿರ ನಡೆಯಲಿದೆ. ಶಾಲೆಗಳಲ್ಲಿ ಪೂರಕ ಸಿದ್ಧತೆ ಪೂರ್ಣಗೊಂಡಿದೆ. ಹಾಡು, ಆಟ, ಕಥೆ ಹೇಳುವುದು, ಭಾಷಣ, ನೃತ್ಯ ಪ್ರದರ್ಶನ, ಚಿತ್ರಕಲೆ, ನಾಟಕ ತರಬೇತಿ ಸಹಿತ ಮಕ್ಕಳನ್ನು ರಚನಾತ್ಮಕ ಚಟುವಟಿಕೆಗಳಿಗೆ ಪ್ರೇರೇಪಿಸುವ ವಿವಿಧ ಕಾರ‌್ಯಕ್ರಮಗಳನ್ನು ಇದು ಒಳಗೊಂಡಿದೆ.
ಶಿವಪ್ರಕಾಶ್ ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

Leave a Reply

Your email address will not be published. Required fields are marked *