ಅಂಬರೀಷ್​ ನಾಲ್ಕನೇ ತಿಂಗಳ ಪುಣ್ಯತಿಥಿ: ಇಂದು, ನಾಳೆ ಸುಮಲತಾ ಪ್ರಚಾರಕ್ಕೆ ಬ್ರೇಕ್​

ಮಂಡ್ಯ: ಈಗಾಗಲೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಮಂಡ್ಯದ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವ ಸುಮಲತಾ ಇಂದು ಅಂಬರೀಷ್​ ಅವರ ನಾಲ್ಕನೇ ತಿಂಗಳ ಪುಣ್ಯತಿಥಿ ನಿಮಿತ್ತ ಪ್ರಚಾರವನ್ನು ನಿಲ್ಲಿಸಿದ್ದಾರೆ.

ಸಮಾಧಿ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾತ್ರಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಅಂಬಿ ಮೃತಪಟ್ಟು ನಾಲ್ಕು ತಿಂಗಳು ಕಳೆದಿದ್ದು ಇಂದು ಸುಮಲತಾ ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ, ಅಂಬರೀಷ್​ ಫೋಟೋ ಶೇರ್​ ಮಾಡಿ, ನನ್ನೊಳಗಿನ ಶಕ್ತಿ ನೀವು, ಅದೇ ಬೆಳಕು ನನ್ನನ್ನು ಮುನ್ನಡೆಸುತ್ತಿದೆ. ನಿಮ್ಮ ಪ್ರೀತಿಯೇ ನನ್ನನ್ನು ಜೀವಂತವಾಗಿ, ಉತ್ಸಾಹದಿಂದ ಇಟ್ಟಿದೆ. ನೀವು ನನ್ನೊಂದಿಗೆ ಸದಾ ಇರುತ್ತೀರಿ. ನೀವಿಲ್ಲದ ನಾಲ್ಕನೇ ತಿಂಗಳು ಇದು. ಆದರೆ ಪ್ರತಿಕ್ಷಣ ನನ್ನೊಂದಿಗೇ ಇದ್ದೀರಿ ಎಂದು ಬರೆದಿದ್ದಾರೆ.

ಸೋಮವಾರ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿರುವ ಅವರು, ಮಂಗಳವಾರ ಶ್ರೀರಂಗಪಟ್ಟಣದಲ್ಲಿ ರೋಡ್​ ಶೋ, ಪ್ರಚಾರ ಸಭೆ ನಡೆಸಲಿದ್ದಾರೆ.

ಕಿತ್ತಾಟಗಳು ಪ್ರಜಾಪ್ರಭುತ್ವದ ಕಿರೀಟವಲ್ಲ

ಮಂಡ್ಯದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗಳಿಂದ ನೊಂದು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಪೋಸ್ಟ್​ ಹಾಕಿರುವ ಸುಮಲತಾ, ಮಂಡ್ಯದ ಜನರ ಭವಿಷ್ಯಕ್ಕಾಗಿ ನೋವುಗಳನ್ನೆಲ್ಲ ಸಹಿಸಿಕೊಂಡು ಶಾಂತಿಯುತವಾಗಿ ಚುನಾವಣೆ ಎದುರಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ. ಪರಸ್ಪರ ಕಿತ್ತಾಟಗಳು, ಪರಸ್ಪರ ಘರ್ಷಣೆಗಳು, ಆರೋಪ, ಪ್ರತ್ಯಾರೋಪಗಳು ಪ್ರಜಾಪ್ರಭುತ್ವದ ಕಿರೀಟವಾಗಲು ಸಾಧ್ಯವೇ ಇಲ್ಲ. ಶಾಂತಿ, ಸೌಹಾರ್ದದ ವಾತಾವರಣದಿಂದ ಚುನಾವಣೆಗಳು ನಡೆಯಬೇಕು. ಟೀಕಿಸುವವರು, ಅನವಶ್ಯಕ ಮಾತನಾಡುತ್ತಿರುವವರು ಆಡುತ್ತಿರಲಿ. ನಾವು ಜವಾಬ್ದಾರಿಯಿಂದ ಹೆಜ್ಜೆ ಇಡೋಣ ಎಂದು ಪೋಸ್ಟ್​ ಮಾಡಿದ್ದಾರೆ.