ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್​ ಭೇಟಿ ಹಿಂದಿನ ಕಾರಣವೇನು?

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಬೇಕೆಂಬ ಒತ್ತಡದಲ್ಲಿರುವ ದಿ.ಅಂಬರೀಶ್​ ಅವರ ಪತ್ನಿ ಸುಮಲತಾ ಅವರು ಇಂದು ಆದಿಚುಂಚನಗಿರಿಯ ಮಠಕ್ಕೆ ಭೇಟಿ ನೀಡಿದರು.

ಬೆಳಗ್ಗೆ 8.30ಕ್ಕೆ ಪುತ್ರ ಅಭಿಷೇಕ್ ಸಹಿತ ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಅವರು ಮೊದಲು ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ನಂತರ ಮಠಕ್ಕೆ ತೆರಳಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.

ಸುಮಲತಾ ಮತ್ತು ಅಭಿಷೇಕ್​ ಅವರ ಜತೆಗೆ ಚಿತ್ರ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವರು ಇದ್ದರು.

ರಾಜಕೀಯ ಪ್ರವೇಶಿಸುವಂತೆ ತಮ್ಮ ಮೇಲಿರುವ ಒತ್ತಡ, ಇದಕ್ಕೆ ಜೆಡಿಎಸ್​ ಪಾಳಯದಿಂದ ವ್ಯಕ್ತವಾಗುತ್ತಿರುವ ಪ್ರತಿರೋಧ, ಮುಂದಿನ ನಡೆಗಳ ಕುರಿತು ಸುಮಲತಾ ಅವರು ಶ್ರೀಗಳಿಂದ ಸಲಹೆ, ಮಾರ್ಗದರ್ಶನ ಪಡೆದರು ಎಂದು ಹೇಳಲಾಗಿದೆ.

ಭೇಟಿ ನಂತರ ಮಾತನಾಡಿದ ಸುಮಲತಾ ಅಂಬರೀಶ್​ ಅವರು, “ಅಂಬರೀಶ್​ ಅವರು ಮಂಡ್ಯದೊಂದಿಗೆ ಹೊಂದಿದ್ದ ಗಾಢವಾದ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂಬ ಅದಮ್ಯ ಹಂಬಲವಂತೂ ನನಗಿದೆ. ಜನರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವ ಆಸೆಯಿದೆ. ಅದನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ,” ಎಂದು ಅವರು ಹೇಳಿದರು.