ದೊಡ್ಡಅರಸಿನಕೆರೆಯಲ್ಲಿ ಮಾರಾಮಾರಿ

ಕೆ.ಎಂ.ದೊಡ್ಡಿ/ಮಳವಳ್ಳಿ: ಅತಿಸೂಕ್ಷ್ಮ ಮತಗಟ್ಟೆ ಎನಿಸಿಕೊಂಡಿದ್ದ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗ್ರಾಮ ದೊಡ್ಡಅರಸಿನಕೆರೆಯಲ್ಲಿ ಗುರುವಾರ ಜೆಡಿಎಸ್ ಹಾಗೂ ಸುಮಲತಾ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಪೊಲೀಸರು ಜನರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದರು.

ಮಧ್ಯಾಹ್ನ 12 ಗಂಟೆಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಆಗಮಿಸಿ ಮತದಾನ ಮಾಡಿ, ಮತಗಟ್ಟೆಯಿದ್ದ ಶಾಲಾ ಕಾಂಪೌಂಡ್ ಒಳಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ಮುಂದಾದಾಗ ಪೊಲೀಸರು ಅವಕಾಶ ನೀಡದೆ, ಅಲ್ಲಿಂದ ಹೊರಗೆ ಕಳಿಸಿದರು.

ನಂತರ ಸುಮಲತಾ ಹೊರಡುತ್ತಿದ್ದಂತೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಸಚಿವ ಡಿ.ಸಿ.ತಮ್ಮಣ್ಣ ಆಗಮಿಸಿ ರೋಡ್ ಶೋ ಮಾಡಲಾರಂಭಿಸಿದರು. ಆಗ ಜೆಡಿಎಸ್ ಬೆಂಬಲಿಗರು ಘೋಷಣೆ ಕೂಗಲಾರಂಭಿಸಿದರು. ಇದರಿಂದ ಆಕ್ರೋಶಗೊಂಡ ಸುಮಲತಾ ಬೆಂಬಲಿಗರು ನಮ್ಮ ಅಭ್ಯರ್ಥಿಗೆ ಅವಕಾಶ ನೀಡಲಿಲ್ಲ. ಇವರಿಗೆ ನೀಡುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ತಿರುಗಿಬಿದ್ದರಲ್ಲದೆ, ನಿಖಿಲ್ ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು.

ಆಗ ಜೆಡಿಎಸ್ ಕಾರ್ಯಕರ್ತರು, ಸುಮಲತಾ ಬೆಂಬಲಿಗರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಇದನ್ನು ತಡೆಯದ ಪೊಲೀಸರು ಆರಂಭದಲ್ಲಿ ಮೌನಕ್ಕೆ ಶರಣಾದರು. ಮಾತಿನ ಚಕಮಕಿ ಜೋರಾಗಿ ಬಡಿದಾಟ ಶುರುವಾಯಿತು. ಇಬ್ಬರ ಬೆಂಬಲಿಗರ ಮೇಲೂ ಹಲ್ಲೆಗಳಾದ ನಂತರ ಪೊಲೀಸರು ಪರಿಸ್ಥಿತಿ ಕೈ ಮೀರಲಿದೆ ಎಂಬುದನ್ನು ಅರಿತು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದರು.

ತಮ್ಮದೇ ಸರ್ಕಾರವಿದೆ ಎಂದು ಸಚಿವರು, ಜೆಡಿಎಸ್ ಅಭ್ಯರ್ಥಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುಮಲತಾ ಬೆಂಬಲಿಗರು ಆಗ್ರಹಿಸಿದರು.

ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೆ, ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ದು, ಯಾವ ಸಂದರ್ಭದಲ್ಲಿ ಸ್ಫೋಟಿಸಲಿದೆ ಎಂಬುದನ್ನು ಊಹಿಸಲಾಗುತ್ತಿಲ್ಲ.

ಬೂತ್ ಏಜೆಂಟ್ ಮೇಲೆ ಹಲ್ಲೆ: ಮಳವಳ್ಳಿ ತಾಲೂಕಿನ ಹಾಡ್ಲಿ ಬಸವನಪುರದ ಮತಗಟ್ಟೆಯಲ್ಲಿ ಬೂತ್ ಏಜೆಂಟ್‌ರಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕುಳಿತಿದ್ದ ವ್ಯಕ್ತಿಯ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಗ್ರಾಮದ ಚನ್ನಬಸವಣ್ಣ ಎಂಬಾತ ಹಲ್ಲೆಗೊಳಗಾದವ. ಇವರು ಮತದಾನ ಮಾಡಲು ಶಕ್ತರಿರುವ ಮತದಾರರನ್ನು ಜೆಡಿಎಸ್ ಕಾರ್ಯಕರ್ತರು ಮತಗಟ್ಟೆಗೆ ಕರೆತಂದು ಮತ ಹಾಕಿಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.