ನಾಮಪತ್ರ ಸಲ್ಲಿಕೆಗೂ ಮುನ್ನ ಸುಮಲತಾ ಟೆಂಪಲ್ ರನ್​

ಮೈಸೂರು: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿರುವ ಸುಮಲತಾ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅದಕ್ಕೂ ಮೊದಲು ಟೆಂಪಲ್​ ರನ್​ ಆರಂಭಿಸಿದ್ದಾರೆ.

ಬುಧವಾರ ಬೆಳ್ಳಂಬೆಳಗ್ಗೆಯೇ ಮೈಸೂರಿಗೆ ಆಗಮಿಸಿರುವ ಅವರು, ಚಾಮುಂಡಿ ಬೆಟ್ಟಕ್ಕೆ ತೆರಳಿದರು. ಅಲ್ಲಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಇವರ ಜತೆ ಪುತ್ರ ಅಭಿಷೇಕ್​, ರಾಕ್​ಲೈನ್​ ವೆಂಟೇಶ್​ ಇದ್ದರು. ಆದರೆ, ಯಶ್​ ಮತ್ತು ದರ್ಶನ್​ ಇರಲಿಲ್ಲ. ಅವರೆಲ್ಲರೂ ನಾಮಪತ್ರ ಸಲ್ಲಿಕೆ ಮತ್ತು ಬಹಿರಂಗ ಸಾರ್ವಜನಿಕ ಸಮಾರಂಭಕ್ಕೆ ಹಾಜರಾಗಲಿದ್ದಾರೆ.

ಚಾಮುಂಡೇಶ್ವರಿ ದರ್ಶನದ ನಂತರ ಮಂಡ್ಯಕ್ಕೆ ತೆರಳಲಿರುವ ಸುಮಲತಾ ಅವರು ನಂತರ ಅಲ್ಲಿಯೂ ಕೆಲ ದೇಗುಲಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ನಂತರ ಅವರು 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಸೋಮವಾರ ತಮ್ಮ ಸ್ಪರ್ಧೆಯನ್ನು ಖಚಿತಪಡಿಸುತ್ತಿದ್ದಂತೆ ತಿರುಪತಿ ತಿರುಮಲಕ್ಕೆ ತೆರಳಿದ್ದ ಸುಮಲತಾ ಅವರು ನಂತರ ಮಂಗಳವಾರ ಬೆಳಗ್ಗೆ ಅಂಬರೀಷ್​ ಅವರ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.