ಮಂಡ್ಯ ಕಣದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ಸುಮಲತಾ: ಅಂಬರೀಷ್​ ಅದೃಷ್ಟದ ಮನೆಯೇ ಕಚೇರಿ

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಕೈಗೊಂಡಿರುವ ನಟ, ರಾಜಕಾರಣಿ, ದಿವಂಗತ ಅಂಬರೀಷ್​ ಪತ್ನಿ ಸುಮಲತಾ ಅವರು, ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಜನಸಂಪರ್ಕಕ್ಕಾಗಿ ಕಚೇರಿ ಆರಂಭಿಸಲು ನಿರ್ಧಿಸಿರುವ ಅವರು, ಅಂಬರೀಷ್​ ಅವರ ಅದೃಷ್ಟದ ಮನೆಯನ್ನೇ ತಮ್ಮ ಕಚೇರಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

2008ರ ವಿಧಾನಸಭೆ ಚುನಾವಣೆ, 2009ರ ಲೋಕಸಭೆ ಚುನಾವಣೆ ಸೋತಿದ್ದ ಅಂಬರೀಷ್​ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ ಚಾಮುಂಡೇಶ್ವರಿ ಬಡಾವಣೆಯ 3ನೇ ಕ್ರಾಸ್​ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಆ ಮನೆ ಅವರಿಗೆ ಅದೃಷ್ಟ ತಂದು ಕೊಟ್ಟಿತ್ತು. ಅಂಬರೀಷ್​ 2013ರಲ್ಲಿ ವಿಧಾನಸಭೆ ಪ್ರವೇಶಿಸಿ ಸಚಿವರಾಗಿದ್ದರು. ಆದರೆ, ಸಚಿವ ಸ್ಥಾನದಿಂದ ಕೆಳಗಿಳಿದ ನಂತರ ಮನೆ ಖಾಲಿ ಮಾಡಿದ್ದರು. ಅದೇ ಮನೆಯನ್ನು ಸದ್ಯ ಮತ್ತೊಮ್ಮೆ ತಮ್ಮ ಸುಪರ್ದಿಗೆ ಪಡೆದಿರುವ ಸುಮಲತಾ, ಅದನ್ನು ತಮ್ಮ ಕಚೇರಿಯನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ.

ಅಗತ್ಯ ಬಿದ್ದರೆ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಿಸುವ ಚಿಂತನೆಯಲ್ಲಿರುವ ಸುಮಲತಾ, ಬಂದೀಗೌಡ ಬಡಾವಣೆಯ ಸಂಬಂಧಿಕರ ನಿವೇಶನ ಅಥವಾ ಮಂಡ್ಯ ಹೊರವಲಯದ ಮಂಜುನಾಥ್ ನಗರದಲ್ಲಿ ಸ್ವಂತ ನಿವೇಶನ ಖರೀದಿ ಮನೆ ನಿರ್ಮಾಣ ಮಾಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.