18ಕ್ಕೆ ಸುಮಲತಾ ಅಂಬರೀಷ್ ನಿರ್ಧಾರ ಪ್ರಕಟ

ನಾಗಮಂಗಲ/ಬೆಂಗಳೂರು: ಲೋಕಸಭಾ ಚುನಾವಣೆಯ ಕಾವು ಏರಿದ್ದು, ಸುಮಲತಾ ಅಂಬರೀಷ್ ಎರಡನೇ ಸುತ್ತಿನ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ತಾಲೂಕಿನ ವಿವಿಧೆಡೆ ಸೋಮವಾರ ಸಂಚರಿಸಿದ ಅವರು ಅಂಬರೀಷ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಅಂಬಿ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಕದಬಹಳ್ಳಿ ಕಾವೇಟಿ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ತೊಂಡಹಳ್ಳಿ ಗ್ರಾಮದ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಂತರ ಮಾತನಾಡಿದ ಸುಮಲತಾ, ಇಂದು ದೇವರ ದರ್ಶನಕ್ಕೆ ಬಂದಿದ್ದೇನೆ. ರಾಜಕೀಯವಾಗಿ ಹೆಚ್ಚು ಮಾತನಾಡಲ್ಲ. ನನ್ನ ಸ್ಪರ್ಧೆ ಬಗ್ಗೆ ಮಾ.18ರಂದು ನಿರ್ಧಾರ ಪ್ರಕಟಿಸುತ್ತೇನೆ ಎಂದರು. ಇದೇ ವೇಳೆ, ಚುನಾವಣಾ ಖರ್ಚಿಗೆಂದು ಇತಿಹಾಸಕಾರ ಡಾ.ಎನ್.ಜೆ.ರಾಮಕೃಷ್ಣ ಅವರು ಸುಮಲತಾರಿಗೆ 25 ಸಾವಿರ ರೂ. ದೇಣಿಗೆ ನೀಡಿದರು.

ರಂಗೇರಿದ ಮಂಡ್ಯ ಕಣ

ಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಮಂಡ್ಯ ಲೋಕಸಭಾ ಕಣ ರಂಗೇರುತ್ತಿದೆ. ಪಕ್ಷೇತರವಾಗಿ ಕಣಕ್ಕಿಳಿಯುವುದಾಗಿ ಹೇಳಿಕೊಳ್ಳುತ್ತಿರುವ ಸುಮಲತಾ ಅಂಬರೀಷ್ ಫೇಸ್​ಬುಕ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ‘ಇನ್ಮುಂದೆ ತಮ್ಮೆಲ್ಲರ ಸಂಪರ್ಕದಲ್ಲಿ ನಾನಿರುತ್ತೇನೆ. ತಮ್ಮ ಸಲಹೆ, ಮಾರ್ಗದರ್ಶನ, ಸಹಕಾರ ಹೀಗೆಯೇ ನಿರಂತರವಾಗಿರಲಿ’ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದು, ಕೇವಲ 9 ಗಂಟೆಯಲ್ಲಿ 9200 ಜನ ವಿಡಿಯೋ ವಿಕ್ಷಿಸಿದ್ದರೆ, 188 ಜನ ಶೇರ್ ಮಾಡಿದ್ದು, 1300 ಜನ ಲೈಕ್ ಮಾಡಿದ್ದಾರೆ. ಜತೆಗೆ ಬೆಂಬಲಿಗರು ‘ಮಂಡ್ಯ ಚುನಾವಣೆ 2019-ಅಂಬಿ ಅಮರ’ ಸ್ವಯಂಸೇವಕರ ನೋಂದಣಿಗೆ ಚಾಲನೆ ನೀಡಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೊಷಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಶನಿವಾರ, ಭಾನುವಾರ ಮುಖಂಡರ ಭೇಟಿ ಮಾಡಿದ್ದು, ಸೋಮವಾರ ಕಾಣಿಸಿಕೊಂಡಿಲ್ಲ. ಬಿಜೆಪಿ ಮುಖಂಡರು ಮಾತ್ರ ಪಕ್ಷದಿಂದ ಅಭ್ಯರ್ಥಿ ಬೇಕೇ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸುತ್ತಿದ್ದಾರೆ.

ನಾನು ಏಕಾಂಗಿಯಲ್ಲ…

ನನ್ನನ್ನು ಸ್ವೀಕಾರ ಮಾಡುತ್ತಾರೋ, ತಿರಸ್ಕರಿಸುತ್ತಾರೋ ಗೊತ್ತಿಲ್ಲ. ಅದು ಮಂಡ್ಯ ಜನತೆಗೆ ಬಿಟ್ಟದ್ದು. ಇದೆಲ್ಲದಕ್ಕೂ ಸಿದ್ಧಳಾಗಿಯೇ ಬಂದಿದ್ದೇನೆ. ನಾನಂತೂ ಏಕಾಂಗಿಯಲ್ಲ, ಜನರೇ ನನ್ನ ಜೊತೆ ಇದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿರುವ ಸುಮಲತಾ ಅಂಬರೀಷ್ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ಜನರೇ ರಾಜಕೀಯಕ್ಕೆ ಬರುವಂತೆ ಒತ್ತಾಯಿಸಿದ್ದಾರೆ ಹೊರತು ನಾನಾಗಿ ಬಂದಿಲ್ಲ. ಪಕ್ಷದಿಂದ ಸ್ಪರ್ಧಿಸಬೇಕೇ? ಪಕ್ಷೇತರವಾಗಿ ನಿಲ್ಲಬೇಕೇ ಎಂಬ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ರಾಜಕೀಯದಲ್ಲಿ ಅಂಬರೀಷ್ ತುಂಬಾ ಮೋಸ ಹೋಗಿದ್ದಾರೆ. ಹೀಗಾಗಿ ಮನೆಯವರು ಯಾಕೆ ಈ ಕಷ್ಟ ಅನುಭವಿಸಬೇಕು ಎಂದು ನಮಗೆ ಚುನಾವಣೆ ಬೇಡ ಎಂದಿದ್ದರು. ಆದರೆ, ಚುನಾವಣೆ ಎದುರಿಸಿ ಗೆಲ್ಲುವುದೇ ನನ್ನ ಮೊದಲ ಗುರಿ ಎಂದರು.

ಚಿರಂಜೀವಿ ಬೆಂಬಲ: ದರ್ಶನ್ ಮೊದಲಿನಿಂದಲೂ ನಮ್ಮ ಕಷ್ಟಗಳಲ್ಲಿ ಭಾಗಿಯಾಗಿದ್ದಾರೆ. ಯಶ್ ಸಹಿತ ಚಿತ್ರರಂಗದ ಪ್ರತಿಯೊಬ್ಬರೂ ಬೆಂಬಲ ನೀಡಿದ್ದಾರೆ. ರಾಕ್​ಲೈನ್ ವೆಂಕಟೇಶ್ ನಮ್ಮ ಮನೆಯ ಸದಸ್ಯ, ನನ್ನ ಸಹೋದರ. ಚಿರಂಜೀವಿ ದೂರವಾಣಿ ಕರೆ ಮಾಡಿ ನನ್ನ ನಿರ್ಧಾರಕ್ಕೆ ಬೆಂಬಲ ನೀಡಿ ಮುನ್ನುಗ್ಗಿ ಎಂದು ಶುಭ ಹಾರೈಸಿದ್ದಾರೆಂದು ಸುಮಲತಾ ಹೇಳಿದರು.