ಬಿಜೆಪಿ ಬೆಂಬಲದಿಂದ ಮತ್ತಷ್ಟು ಬಲ, ಕಾಂಗ್ರೆಸ್​ ಕಾರ್ಯಕರ್ತರೂ ನನ್ನ ಪರ ಇದ್ದಾರೆ: ಸುಮಲತಾ ಅಂಬರೀಷ್​

ಬೆಂಗಳೂರು: ಬಿಜೆಪಿಯಿಂದ ಅಧಿಕೃತವಾಗಿ ಬೆಂಬಲ ಘೋಷಣೆ ಮಾಡಿರುವುದು ನನಗೆ ಮತ್ತಷ್ಟು ಬಲ ಹೆಚ್ಚಿಸಿದೆ. ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್​​ ಹೇಳಿದರು.

ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಬೆಂಬಲ ನೀಡುವ ಬಗ್ಗೆ ಅಧಿಕೃತ ಮಾಹಿತಿ ಇರಲಿಲ್ಲ. ನನ್ನನ್ನು ಯಾರೂ ನೇರವಾಗಿ ಭೇಟಿ ಮಾಡಿರಲಿಲ್ಲ. ಫೋನ್​ನಲ್ಲೂ ಹೇಳಿರಲಿಲ್ಲ. ಅಂಬರೀಷ್​ ಮೇಲಿನ ಗೌರವದಿಂದ ಮಂಡ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ನನಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ತುಂಬ ಸಂತೋಷವಾಗಿದೆ. ನನ್ನ ಮನಸಿನಲ್ಲಿಯೂ ಬಿಜೆಪಿ ಬೆಂಬಲ ನೀಡಲಿ ಎಂದು ಇತ್ತು. ಈಗ ನನಗೆ ಮತ್ತಷ್ಟು ಶಕ್ತಿ ಬಂದಂತಾಯಿತು ಎಂದು ತಿಳಿಸಿದರು.

ಜನರನ್ನೇ ಕೇಳುತ್ತೇನೆ
ಈಗ ಬಿಜೆಪಿ ಬೆಂಬಲ ನೀಡುತ್ತದೆ, ಎಲೆಕ್ಷನ್​ನಲ್ಲಿ ಗೆದ್ದ ಬಳಿಕ ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜಕೀಯಕ್ಕೆ ಕಾಲಿಟ್ಟಿದ್ದು ಜನರ ಆಶಯ. ಮಂಡ್ಯದ ಮೂಲೆಮೂಲೆಗೆ ಹೋಗಿ ಜನರನ್ನೇ ಕೇಳಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗುವುದು ಕಠಿಣ ಸವಾಲು. ಆದರೂ ಜನರು ಹೇಳಿದ್ದಾರೆಂದು ಆ ಸವಾಲನ್ನು ಸ್ವೀಕರಿಸಿದ್ದೇನೆ. ಹಾಗೇ ಬಿಜೆಪಿಗೆ ಸೇರುವ ಬಗ್ಗೆಯೂ ನಾನು ಜನರನ್ನೇ ಕೇಳುತ್ತೇನೆ. ನಾನು ಜನರಿಗಾಗಿ ಹೋರಾಟಕ್ಕೆ ಹೆಜ್ಜೆ ಇಟ್ಟಿದ್ದೇನೆ. ಅವರು ಹೇಳಿದಂತೆಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬೂತ್​ ಮಟ್ಟದಿಂದಲೇ ಕೆಲಸ ಪ್ರಾರಂಭ
ಚುನಾವಣೆಗೆ ಕೆಲಸ ಮಾಡಲು ತಂಡ ರಚನೆಯಾಗುತ್ತಿದೆ. ಕಾಂಗ್ರೆಸ್​ನ ಕೆಲವು ಕಾರ್ಯಕರ್ತರೂ ನನ್ನ ಪರ ಕೆಲಸ ಮಾಡಲು ಬರುತ್ತಿದ್ದಾರೆ. ಅವರನ್ನು ಪಕ್ಷ ಉಚ್ಚಾಟನೆ ಮಾಡಿರಬಹುದು. ಆದರೆ ಅವರು ನನ್ನ ಪರ ಕೆಲಸ ಮಾಡುವುದನ್ನು ತಪ್ಪಿಸಲು ಆಗುವುದಿಲ್ಲ. ಇಲ್ಲಿ ಸರ್ವಾಧಿಕಾರತ್ವ ನಡೆಯುವುದಿಲ್ಲ. ಈಗ ಬಿಜೆಪಿಯ ಕಾರ್ಯಕರ್ತರೂ ನನಗೆ ಬೆಂಬಲ ನೀಡುತ್ತಾರೆ. ಅಲ್ಲದೆ ಯಶ್​, ದರ್ಶನ್​ ಅಭಿಮಾನಿಗಳು ಇದ್ದಾರೆ. ಅಖಿಲ ಕರ್ನಾಟಕ ರೈತ ಸಂಘವೂ ನನ್ನ ಜತೆ ನಿಂತಿದೆ. ಇವರನ್ನೆಲ್ಲ ಒಟ್ಟಾಗಿ ಸೇರಿಸಿಕೊಂಡು ಬೂತ್​ ಮಟ್ಟದಲ್ಲಿ ಕೆಲಸಮಾಡುತ್ತೇವೆ ಎಂದು ಹೇಳಿದರು.

ಸಿಎಂ ಬಗ್ಗೆ ಮಾತನಾಡುವುದಿಲ್ಲ
ಎಚ್​.ಡಿ.ಕುಮಾರಸ್ವಾಮಿಯವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದ ಸುಮಲತಾ, ಅವರು ಆಡಳಿತ ಪಕ್ಷದಲ್ಲಿದ್ದಾರೆ. ಹಾಗಾಗಿ ಅವರಲ್ಲಿ ತುಂಬ ಆತ್ಮವಿಶ್ವಾಸವಿದೆ. ನನ್ನ ಹೋರಾಟ ನನಗೆ, ಅವರ ಆತ್ಮವಿಶ್ವಾಸ ಅವರಿಗೆ ಎಂದರು.

ಮಹಿಳೆಯರ ಸಹಕಾರ ನನಗೆ ಇದೆ
ನನಗೆ ಮಹಿಳೆಯರು ಸಹಕಾರ ಕೊಡುತ್ತಾರೆ ಎಂದು ಬಲವಾಗಿ ನಂಬಿಕೆ ಇದೆ. ಮಹಿಳೆಯರು ಪುರುಷ ಜನಪ್ರತಿನಿಧಿಗಳ ಬಳಿ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳುವುದಿಲ್ಲ. ಆದರೆ ನನ್ನ ಬಳಿ ಎಲ್ಲವನ್ನೂ ಹೇಳಬಹುದು. ಹೀಗಾಗಿ ಖಂಡಿತ ಸಹಕಾರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಗೇ ದರ್ಶನ್​ ಮನೆ ಮೇಲೆ ಕಲ್ಲು ತೂರಾಟ, ದರ್ಶನ್​, ಯಶ್​ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿ, ಇದೆಲ್ಲ ಬೆಳವಣಿಗೆಗಳಿಂದ ದರ್ಶನ್​, ಯಶ್​ಗೆ ಯಾವುದೇ ನಷ್ಟವಿಲ್ಲ. ಅವರು ಕರ್ನಾಟಕದ ಆಸ್ತಿ. ಎಲ್ಲ ಕಡೆ ಅವರ ಅಭಿಮಾನಿಗಳು ಇದ್ದಾರೆ ಎಂದರು.

3 Replies to “ಬಿಜೆಪಿ ಬೆಂಬಲದಿಂದ ಮತ್ತಷ್ಟು ಬಲ, ಕಾಂಗ್ರೆಸ್​ ಕಾರ್ಯಕರ್ತರೂ ನನ್ನ ಪರ ಇದ್ದಾರೆ: ಸುಮಲತಾ ಅಂಬರೀಷ್​”

  1. anu nataka madam yalla kade e nataka nadiyala nivu guntooralli bjp candidate agi nithukobhodalla illa andre mandya dalli bjp or pawan kalyan nimma atmiya snehitha chiruthammana party alli ninthuko madam

Comments are closed.