ಯಾರೂ ಏನೇ ಮಾತನಾಡಿದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ: ಸುಮಲತಾ ಅಂಬರೀಷ್‌

ಮಂಡ್ಯ: ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಬಾರದು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಪೂಜಿಸುತ್ತಾರೆ. ಯಾರು ಏನೇ ಮಾತನಾಡಿಕೊಳ್ಳಲಿ. ನಾನಂತೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ.

ನನ್ನ ಆತ್ಮಸ್ಥೈರ್ಯ ಕುಗ್ಗಿಸಲೂ ಆಗುವುದಿಲ್ಲ. ಅಂಬರೀಶ್ ಮನಸ್ಥಿತಿ ಕೂಡ ಕೆಟ್ಟದ್ದಾಗಿ ಇರಲಿಲ್ಲ. ಯಾರು ಏನೇ ಮಾತಾಡಿದ್ರು ಡೋಂಟ್ ಕೇರ್ ಅನ್ನೋರು. ನಾನು ಕೂಡ ಅಂಬರೀಶ್ ಮಾರ್ಗದರ್ಶನದಲ್ಲೇ ಹೋಗುತ್ತೇನೆ. ಯಾವ ದಿನವೂ ಈ ರೀತಿ ಮಾತುಗಳು ಮಹಿಳೆಯರ ಬಗ್ಗೆ ಬರಬಾರದು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಪೂಜಿಸುತ್ತಾರೆ. ಮಹಿಳೆಯರನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ದೇಶ ನಮ್ಮದು. ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ನಾವು ಏನೇ ಮಾತನಾಡಿದರೂ ಜನರಿಗೆ ಸಂದೇಶ ಹೋಗುತ್ತದೆ. ನಾವೆಲ್ಲ ಸಾಮಾಜಿಕ ಕ್ಷೇತ್ರದಲ್ಲಿರುವಂತವರು. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಏನು ಮಾತನಾಡಿದರೂ ಸರಿ, ತಪ್ಪು ಎನ್ನುವುದನ್ನು ನೋಡಬೇಕು. ಯಾವುದು ಸರಿ ತಪ್ಪು ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು. ಈ ಬಗ್ಗೆ ಜನ ತೀರ್ಮಾನ ಮಾಡಬೇಕು. ನನ್ನಲ್ಲಿ ಯಾವುದೇ ತಪ್ಪಿಲ್ಲ. ನಾನು ಯಾವತ್ತೂ ಯಾರಿಗೂ ಸವಾಲು ಹಾಕಿಲ್ಲ. ಯಾರನ್ನೂ ವಿರೋಧ ಮಾಡುವುದಿಲ್ಲ. ವಿವಾದ ಕೂಡ ಮಾಡುವುದಿಲ್ಲ ಎಂದು ಹೇಳಿದರು.

ಆ ಪ್ರಚೋದನಾಕಾರಿ ಹೇಳಿಕೆ ನೀಡಿ, ನನ್ನಿಂದ ಬೇರೆಯದೇ ಮಾತುಗಳನ್ನಾಡಿಸುವ ಯತ್ನ ಸಫಲವಾಗಲ್ಲ. ಒಳ್ಳೆಯದು ಕೆಟ್ಟದ್ದು ಸಂದೇಶ ಕೊಡುವ ಜವಾಬ್ದಾರಿ ನಿಮ್ಮ ಮೇಲೂ ಇದೆ. ಇದನ್ನು ಪಕ್ಷದ ಪರ – ವಿರೋಧ ನೋಡದೆ ಸಮಾಜಕ್ಕೆ ಸಂದೇಶ ಕೊಡುವತ್ತ ಗಮನಹರಿಸಬೇಕು ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)