ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ನಟಿ ಸುಮಲತಾ ಅಂಬರೀಶ್​ ಸ್ಪಷ್ಟನೆ

ಮಂಡ್ಯ: ರಾಜಕೀಯಕ್ಕೆ ಬರಬೇಕೆಂಬ ಉದ್ದೇಶದಿಂದ ಮಂಡ್ಯಕ್ಕೆ ಬರುತ್ತಿಲ್ಲ. ಬದಲಿಗೆ ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ. ನಮ್ಮ ಮೇಲಿರುವ ನಿಮ್ಮ ಋಣವನ್ನು ತೀರಿಸಲು ನಾನು ಬದ್ಧಳಾಗಿದ್ದೇನೆ ಎಂದು ನಟಿ ಸುಮಲತಾ ಅಂಬರೀಶ್​ ತಿಳಿಸಿದರು.

ಇನ್ನೆಲ್ಲೂ ನನಗೆ ಈ ಪ್ರೀತಿ ಸಿಗುವುದಿಲ್ಲ
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು ಅಂಬರೀಶ್ ಹುಟ್ಟೂರು ಬಿಟ್ಟರೆ ಇನ್ನೆಲ್ಲೂ ನನಗೆ ಈ ಪ್ರೀತಿ ಸಿಗುವುದಿಲ್ಲ. ನಾನು ಏನೇ ತೀರ್ಮಾನ ತೆಗೆದುಕೊಂಡರೂ ನಿಮ್ಮೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳುತ್ತೇನೆ. ಮಂಡ್ಯ ಜನರ ಆಸೆ ಮತ್ತು ಅಪೇಕ್ಷೆಯನ್ನು ಮಾಜಿ ಸಿಎಂ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಅಂಬಿ ಮೇಲಿಟ್ಟಿದ್ದ ಪ್ರೀತಿ ಹಾಗೂ ವಿಶ್ವಾಸ ನಮ್ಮ ಕುಟುಂಬದ ಮೇಲಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಇಚ್ಛೆಯನ್ನು ಸಿದ್ದರಾಮಯ್ಯರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್​ನಿಂದ ಟಿಕೆಟ್​ ನಿರೀಕ್ಷಿಸುತ್ತಿದ್ದೇನೆ
ಕಾಂಗ್ರೆಸ್ ಪಕ್ಷ ನಮ್ಮನ್ನು ಗುರುತಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಜೆಡಿಎಸ್​ನಿಂದ ಸ್ಪರ್ಧಿಸಲು ಆಹ್ವಾನ ಬಂದಿಲ್ಲ. ಕಾಂಗ್ರೆಸ್​ನಿಂದಲೇ ಸ್ಪರ್ಧಿಸುವ ಬಗ್ಗೆ ಉತ್ಸುಕಳಾಗಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದರು. ಉಗ್ರರ ದಾಳಿಯಲ್ಲಿ ಹುತಾತ್ಮನಾದ ಯೋಧ ಎಚ್​. ಗುರು ಅವರ ಕುಟುಂಬಕ್ಕೆ ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಅರ್ಧ ಎಕರೆ ಜಮೀನು ಕೊಡುವುದಾಗಿ ಪುನರುಚ್ಚರಿಸಿದರು.

ಮನೆದೇವರಿಗೆ ಪೂಜೆ
ಇದಕ್ಕೂ ಮುನ್ನ ಚಿಕ್ಕರಸಿನಕೆರೆ ಗ್ರಾಮಕ್ಕೆ ಭೇಟಿ ನೀಡಿದ ಸುಮಲತಾ ಅವರು ಮನೆದೇವರಾದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಬಸವನಿಗೆ ನಮಸ್ಕಾರ ಮಾಡಿ ಕಾಣಿಕೆ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್​)