ಮಧುರ ಮಂಡ್ಯದಲ್ಲಿ ಸ್ವಾಭಿಮಾನದ ‘ಸುಮ’ಕಹಳೆ; ಸಹಸ್ರಾರು ಅಂಬಿ ಅಭಿಮಾನಿಗಳಿಂದ ಶಕ್ತಿ ಪ್ರದರ್ಶನ

ಮಂಡ್ಯ: ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ ಸುಮಲತಾ ಅಂಬರೀಷ್ ಅವರಿಗೆ ಬುಧವಾರ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಾಥ್ ನೀಡುವ ಮೂಲಕ ಸ್ವಾಭಿಮಾನದ ಕಹಳೆ ಮೊಳಗಿಸಿದರು. ಯಾರಿಗೂ ಅಧಿಕೃತ ಆಹ್ವಾನ ನೀಡದೆ ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ನೀಡಿದ ಕರೆಗೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಹಸ್ರಾರು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದರು.

ನಾಮಪತ್ರ ಸಲ್ಲಿಸಲು ಆಗಮಿಸುವ ವಿಷಯ ತಿಳಿದು ಬೆಳಗ್ಗೆಯಿಂದಲೇ ಜನತೆ ಆಗಮಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಹೆಚ್ಚು ಜನ ಜಮಾಯಿಸಿದರೆ ತೊಂದರೆ ಆಗಲಿದೆ ಎಂಬ ಕಾರಣದಿಂದ ಜಿಲ್ಲಾಧಿಕಾರಿ ಕಚೇರಿ ಸುತ್ತ 100 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಆದರೆ, ಜಿಲ್ಲಾಧಿಕಾರಿ ಕಚೇರಿ ಎದುರಿನ ಎರಡು ರಸ್ತೆಗಳು ತುಂಬಿ ತುಳುಕಿದವು. ನಾಮಪತ್ರ ಸಲ್ಲಿಕೆ ಬಳಿಕ ಕಾವೇರಿ ವನಕ್ಕೆ ಆಗಮಿಸಿದ ಸುಮಲ ತಾರನ್ನು ಅಭಿಮಾನಿಗಳು ಹಷೋದ್ಘಾರದೊಂದಿಗೆ ಸ್ವಾಗತಿಸಿದರು. ಇಲ್ಲಿಂದ ಸಿಲ್ವರ್ ಜ್ಯೂಬಿಲಿ ಪಾರ್ಕ್​ವರೆಗೆ ತೆರೆದ ವಾಹನದಲ್ಲಿ ಜನಪದ ತಂಡಗಳೊಂದಿಗೆ ಸುಮ

ಲತಾರನ್ನು ಮೆರವಣಿಗೆ ಯಲ್ಲಿ ಕರೆತರುವುದಕ್ಕೆ ಬರೊಬ್ಬರಿ 2 ತಾಸು ಬೇಕಾಯಿತು. ಮೆರ ವಣಿಗೆಯಲ್ಲಿ ಅಂಬಿ, ಸುಮಲತಾ, ದರ್ಶನ್, ಯಶ್ ಭಾವಚಿತ್ರಗಳನ್ನು ಹಿಡಿದು ಜೈಕಾರ ಕೂಗಿದ ಅಭಿಮಾನಿಗಳು, ‘ಗೋ ಬ್ಯಾಕ್’ ಕರೆ ಕೊಟ್ಟಿದ್ದವರಿಗೆ ಭರ್ಜರಿ ತಿರುಗೇಟು ಕೊಟ್ಟರು. ಪಕ್ಷೇತರ ಅಭ್ಯರ್ಥಿ ಪರ ಸ್ವಯಂ ಪ್ರೇರಿತರಾಗಿ ಸಹಸ್ರಾರು ಜನ (ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ರೈತಸಂಘ) ಸೇರಿದ್ದು ಇತಿಹಾಸ ಸೃಷ್ಟಿಸಿತು. ಸಿಲ್ವರ್ ಜ್ಯೂಬಿಲಿ ಪಾರ್ಕ್ ಮಾತ್ರವಲ್ಲದೆ ಹೆದ್ದಾರಿಯಲ್ಲೇ ಜನತೆ ಜಮಾಯಿಸಿದ್ದರಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತಲ್ಲದೆ, ಸುಮಲತಾ ಗೆದ್ದಾಗಿದೆ. ಮತಗಳ ಅಂತರ ಎಷ್ಟೆಂಬುದಷ್ಟೇ ನಿರ್ಣಯಕ ಎಂಬ ಮಾತುಗಳು ಎಲ್ಲೆಡೆ ರಿಂಗಿಣಿಸಿದವು. ಹೆದ್ದಾರಿಯಲ್ಲೇ ಜನ ಜಮಾಯಿಸಿದ್ದರಿಂದ 4 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಯಿತು. ಸಂಚಾರದಲ್ಲೂ ತೀವ್ರ ವ್ಯತ್ಯಯವಾಯಿತು.

ಮೂರು ಸೆಟ್ ನಾಮಪತ್ರ

ಬುಧವಾರ ಬೆಳಗ್ಗೆ 11 ಗಂಟೆಗೆ ಡಿಸಿ ಕಚೇರಿಗೆ ವಿವಿಧ ಸಮುದಾಯದ ಬಸ್ ನಂಜುಂಡಪ್ಪ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಅನ್ಸರ್, ಸಂಬಂಧಿ ಮದನ್ ಜತೆ ತೆರಳಿದ ಸುಮಲತಾ ಜಿಲ್ಲಾ ಚುನಾವಣಾ ಅಧಿಕಾರಿ ಎನ್.ಮಂಜುಶ್ರೀ ಅವರಿಗೆ 3 ಸೆಟ್​ಗಳ ನಾಮಪತ್ರ ಸಲ್ಲಿಸಿದರು.

ರಕ್ತದಲ್ಲಿ ನಿಮ್ಮ ಕಾಲು ತೊಳೆದರೂ ಕಮ್ಮಿ. ಅಮ್ಮನ ಬೆಂಬಲಕ್ಕೆ ನಿಂತ ಜನರನ್ನು ನೋಡಿ ಖುಷಿಯಾಗುತ್ತದೆ. ನಮ್ಮ ಬಗ್ಗೆ ಮಾತನಾಡುವವರ ಮೇಲೆ ಕೋಪ ಮಾಡಿ ಕೊಳ್ಳುವುದಿಲ್ಲ. ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಇವತ್ತು ಬಾಯಿಗೆ ಬಂದಂಗೆ ಮಾತನಾಡುತ್ತ ಇರುವವರೆಲ್ಲ ಮೇ 23ರಂದು ಕೆಳಗೆ ಇರುತ್ತಾರೆ.

| ದರ್ಶನ್ ಚಿತ್ರನಟ

ಅಂಬಿ ಏನು ಮಾಡಿದ್ದಾರೆ ಎನ್ನುತ್ತಿದ್ದಾರೆ. ಅವರ ಸಾಧನೆಯನ್ನು ಚುನಾವಣೆ ನಡೆಯುವ ದಿನಾಂಕದವೆರೆಗೆ ಹೇಳಬಹುದು. ಮೆಡಿಕಲ್ ಕಾಲೇಜ್ ಬಂದಿದ್ದು ಯಾರಿಂದ? ಯಾರೋ ಹೇಳಿದರು ಇಂದು ಕೇಬಲ್ ಕಟ್ ಮಾಡಿಸಿದ್ದಾರೆ ಅಂತ. ಆದರೆ, ಈ ಜನರ ಪ್ರೀತಿಯನ್ನು ಕಟ್ ಮಾಡಲಾಗದು.

| ಸುಮಲತಾ ಪಕ್ಷೇತರ ಅಭ್ಯರ್ಥಿ

ನಾನು, ದರ್ಶನ್ ತಪ್ಪು ಮಾಡುತ್ತಿಲ್ಲ. ನಮ್ಮ ಲಾಭಕ್ಕೆ ಬಂದಿಲ್ಲ. ಮನೆ ಮಕ್ಕಳಂತೆ ಬಂದಿದ್ದೇವೆ. ಸುಮಲತಾ ಅಕ್ಕನ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು ತಪ್ಪು ಎಂದುಕೊಂಡವರಿಗೆ, ಹಾಗೆ ಮಾತನಾಡುವವರಿಗೆ ಒಂದೇ ಮಾತು ಹೇಳುತ್ತೇನೆ, ನಾವು ಆ ತಪ್ಪನ್ನೇ ಸಾಯುವವರೆಗೂ ಮಾಡುತ್ತೇವೆ.

| ಯಶ್ ಚಿತ್ರನಟ

ಕೇಬಲ್ ಸ್ಥಗಿತಕ್ಕೆ ಅಭಿಮಾನಿಗಳ ಆಕ್ರೋಶ

ಸುಮಲತಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಯಿಂದಲೇ ಜಿಲ್ಲೆಯ ಬಹುತೇಕ ಕಡೆ ಕೇಬಲ್ ಕಟ್ ಆಗಿತ್ತು. ಇದು ಜನರ ಆಕ್ರೋಶಕ್ಕೆ ಕಾರಣವಾಯಿತು. ದಳಪತಿಗಳು ಉದ್ದೇಶಪೂರ್ವಕ ವಾಗಿ ಕೇಬಲ್ ಕಟ್ ಮಾಡಿಸಿದ್ದಾರೆಂದು ಹೆದ್ದಾರಿಯಲ್ಲಿ ಅಳವಡಿಸಿದ್ದ ಜೆಡಿಎಸ್ ನಾಯಕರ ಫ್ಲೆಕ್ಸ್ಗಳನ್ನು ಅಭಿಮಾನಿಗಳು ಧ್ವಂಸ ಮಾಡಿದರು.

ತಾಯಿ ಗೆಲುವಿಗೆ ಮಕ್ಳು ಬಂದ್ರೆ ತಪ್ಪೇನು?

ದರ್ಶನ್ ಮತ್ತು ಯಶ್ ನನ್ನ ಮನೆ ಮಕ್ಕಳು. ತಾಯಿ ಗೆಲುವಿಗೆ ಶ್ರಮಿಸಲು ಮಕ್ಕಳು ಬಂದರೆ ತಪ್ಪೇನು? ತಮ್ಮ ಮಕ್ಕಳ ಪರ ಪ್ರಚಾರಕ್ಕೆ ಅವರು ಬರುವುದಿಲ್ಲವೆ? ಎಂದು ಸುಮಲತಾ, ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು. ಸಿಲ್ವರ್ ಜ್ಯೂಬಿಲಿ ರ್ಪಾನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ದರ್ಶನ್ ಮತ್ತು ಯಶ್ ಬಗ್ಗೆ ಅವಹೇಳನ ಮಾಡಿದರೆ ನಮಗೆ ನೋವಾಗಬಹುದು. ಅವರ ಅಭಿಮಾನಿಗಳು ಇಡೀ ರಾಜ್ಯ ಮತ್ತು ದೇಶದಲ್ಲಿದ್ದಾರೆ. ಇತರೆಡೆ ಅವರ ಅಭಿಮಾನಿಗಳು ತೆಗೆದುಕೊಳ್ಳುವ ತೀರ್ವನದ ಬಗ್ಗೆ ನೆನಪಿರಲಿ. ಇಂದು ಚಿತ್ರರಂಗದವರ ಬಗ್ಗೆ ಮಾತನಾಡುವವರು ಹಿಂದೆ ಅವರಿಂದ ಅನುಕೂಲ ಪಡೆದಿಲ್ಲವೆ ಎಂದು ಪ್ರಶ್ನಿಸಿದರು. ನಾನು ನಿಮ್ಮ ಊರಿನ ಮಳವಳ್ಳಿ ಹುಚ್ಚೇಗೌಡರ ಸೊಸೆ. ಈ ಮಣ್ಣಿನ ಸೊಸೆ. ಅಭಿಷೇಕ್ ಗೌಡನ ತಾಯಿ. ನಿಮ್ಮ ಪ್ರೀತಿಯ ಅಂಬರೀಷ್ ಧರ್ಮಪತ್ನಿ. ಈ ಮಣ್ಣಿನ ಹೆಣ್ಣು ಮಗಳು, ಪ್ರೀತಿಯ ಸೊಸೆ. ನಾನು ಯಾರು ಎನ್ನುವವರಿಗೆ ನೀವು ಉತ್ತರ ಕೊಡಬೇಕಾಗಿದೆ ಎಂದು ಅಭಿಮಾನಿಗಳಿಗೆ ಕರೆ ನೀಡಿದರು. ನನಗೆ ರಾಜಕೀಯದ ಎಬಿಸಿಡಿ ಗೊತ್ತಿಲ್ಲ. ಅಂಬಿ ಕನಸನ್ನು ಮುಂದುವರಿಸುವ ನಂಬಿಕೆ ಇಷ್ಟು ದೂರ ಕರೆದು ಕೊಂಡು ಬಂದಿದೆ. ನನಗೆ ಅಧಿಕಾರದ ಆಸೆ ಇಲ್ಲ. ಇದ್ದಿದ್ದರೆ ಈ ಸವಾಲನ್ನು ಸ್ವೀಕರಿಸದೆ ಎಂಎಲ್​ಸಿ ಆಗಬಹುದಿತ್ತು. ಅವರೇ ಬೆಂಗಳೂರು ಉತ್ತರ, ದಕ್ಷಿಣದಲ್ಲಿ ನಿಲ್ಲಿ ಗೆಲ್ಲಿಸುತ್ತೇವೆ ಎಂದು ಕರೆದರು, ನನ್ನ ಪತಿಯ ಋಣ ತೀರಿಸಬೇಕಿದೆ. ಆದ್ದರಿಂದ ಇಲ್ಲಿಗೆ ಬಂದಿದ್ದೇನೆ. ಹಿಮಾಲಯ ಪರ್ವತ ಹತ್ತಬೇಕಾದ ಪರಿಸ್ಥಿತಿ ಇದೆ ಎಂದು ಗೊತ್ತು. ಅದಕ್ಕೆ ನೀವೇ ಉತ್ತರ ನೀಡಬೇಕು ಎಂದರು. ದೊಡ್ಡಣ್ಣ, ರಾಕ್​ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್ ಸೇರಿ ಕಾಂಗ್ರೆಸ್​ನ ಹಲವು ನಾಯಕರು ವೇದಿಕೆಯಲ್ಲಿದ್ದರು.

ರೆಬೆಲ್ ಅಭ್ಯರ್ಥಿ ಸುಮಲತಾ ಅಂಬರೀಷ್ ಕೋಟ್ಯಧೀಶೆ

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಕೋಟ್ಯಧೀಶೆ. ಸುಮಲತಾ ಬಳಿ 12,70,363 ರೂ. ನಗದು ಇದ್ದು, ಎಚ್​ಡಿಎಫ್​ಸಿ ಬ್ಯಾಂಕ್​ನ 2 ಖಾತೆಗಳಲ್ಲಿ ಕ್ರಮವಾಗಿ 32,34,964 ರೂ. ಹಾಗೂ 1,95,000 ರೂ., ಸಿಟಿ ಬ್ಯಾಂಕ್​ನಲ್ಲಿ 57,85,694 ರೂ., ಎಸ್​ಬಿಐನ 2 ಖಾತೆಗಳಲ್ಲಿ ಕ್ರಮವಾಗಿ 28,52,278 ರೂ., 11,20,617 ರೂ ಇದೆ. ಬ್ಯಾಂಕ್​ಗಳಲ್ಲಿ ಷೇರು ಮತ್ತು ಬಾಂಡ್ ರೂಪದಲ್ಲಿ ವಿಜಯಾ ಬ್ಯಾಂಕ್​ನಲ್ಲಿ 38,975 ರೂ., ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ 2 ಪೆನ್ಷನ್ ಪ್ಲ್ಯಾನ್​ನಲ್ಲಿ ಕ್ರಮವಾಗಿ 3 ಲಕ್ಷ ಹಾಗೂ 75 ಲಕ್ಷ ರೂ. ಹೂಡಿಕೆ ಮಾಡಿರುವುದಾಗಿ ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ. 2013ರಿಂದ 2018ರವರೆಗೆ ಸುಮಲತಾ ಆದಾಯ 81,66,510 ರೂ. ಆಗಿದ್ದರೆ, ನಂತರದ ಆದಾಯ 4,45,87,717 ರೂ. ಜತೆಗೆ ಮೈಸೂರಿನ ತ್ರಿಭುವನ್ ಟವರ್ಸ್​ನಲ್ಲಿ ಶೇ.25 ಷೇರು ಇದ್ದು, ಅದರ ಮೌಲ್ಯ 41 ಲಕ್ಷ ರೂ. ಅಲ್ಲದೆ, 17.72 ಕೋಟಿ ರೂ. ಮೌಲ್ಯದ ಮನೆ, ನಿವೇಶನಗಳು, 5.5 ಕೆ.ಜಿ. ಚಿನ್ನ, 30 ಕೆಜಿ ಬೆಳ್ಳಿ ಇದೆ. ವಿವಿಧ ಸಂಸ್ಥೆಗಳಲ್ಲಿ 92,44,063 ರೂ. ಹೂಡಿಕೆ ಮಾಡಿದ್ದು, ವೈಯಕ್ತಿಕವಾಗಿ 61,51,658 ರೂ. ಸಾಲದ ಜತೆಗೆ ವಿವಿಧ ಬ್ಯಾಂಕ್​ಗಳಲ್ಲಿ 1,42,32,295 ರೂ. ಸಾಲ ಇರುವುದಾಗಿ ತಿಳಿಸಿದ್ದಾರೆ.

One Reply to “ಮಧುರ ಮಂಡ್ಯದಲ್ಲಿ ಸ್ವಾಭಿಮಾನದ ‘ಸುಮ’ಕಹಳೆ; ಸಹಸ್ರಾರು ಅಂಬಿ ಅಭಿಮಾನಿಗಳಿಂದ ಶಕ್ತಿ ಪ್ರದರ್ಶನ”

Comments are closed.