ಜೀವ ಬೆದರಿಕೆಯಿದ್ದು ರಕ್ಷಣೆ ಕೊಡಿ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ ಸುಮಲತಾ

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ಅಖಾಡಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಧುಮುಕಿರುವ ನಟಿ ಸುಮಲತಾ ಅಂಬರೀಷ್​ ಅವರು ನಮಗೆ ಬೆದರಿಕೆ ಇದೆ. ರಕ್ಷಣೆ ಕೊಡಿ ಎಂದು ಸೋಮವಾರ ಮುಖ್ಯ ಚುನಾವಣಾಧಿಕಾರಿಗಳ ಮೊರೆ ಹೋಗಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಾರು ಒಂದೂವರೆ ತಿಂಗಳಿನಿಂದ ನಮ್ಮ ಮನೆ ಸುತ್ತು ಇಂಟಿಲಿಜೆನ್ಸ್​ ಅಧಿಕಾರಿಗಳು ಓಡಾಡುತ್ತಿದ್ದು, ಗೂಢಚರ್ಯೆ ಕೆಲಸವನ್ನು ಮಾಡುತ್ತಿದ್ದಾರೆ. ಒಂದಿಬ್ಬರು ಅಧಿಕಾರಿಗಳನ್ನು ನಾನೇ ಖುದ್ದಾಗಿ ಮಾತನಾಡಿಸಿದ್ದೇನೆ. ಆದರೆ, ಅವರು ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ. ನಮ್ಮ ಸೆಕ್ಯೂರಿಟಿ ಬಳಿ ಹೋಗಿ ಯಾರೆಲ್ಲಾ ಬರ್ತಾರೆ? ಏನೆಲ್ಲಾ ನಡೆಯುತ್ತೆ? ಎಂದೆಲ್ಲಾ ಕೇಳಿದ್ದಾರೆ. ಅಲ್ಲದೆ, ಭೇಟಿ ನೀಡುವವರ ಫೋಟೋಗಳನ್ನು ತೆಗೆದು ಕಳುಹಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ಫೋನ್ ಕೂಡ ಟ್ಯಾಪ್ ಆಗುತ್ತಿದ್ದು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾರದರ್ಶಕ ಚುನಾವಣೆಗಾಗಿ ಆಯೋಗ ಹೆಚ್ಚಿನ ಅಧಿಕಾರಿಗಳನ್ನು ನೇಮಿಸಬೇಕು. ಬೆದರಿಕೆಯ ಹೇಳಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಯಾವುದೇ ಬೆಂಬಲಿಗರಿಲ್ಲದೆ ಸಂಬಂಧಿಯೊಬ್ಬರ ಜತೆ ಬಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)